ಎಸ್. ಆರ್. ರಾಮಸ್ವಾಮಿ ನಿಧನಕ್ಕೆ ಆರ್.ಎಸ್.ಎಸ್ ಶ್ರದ್ಧಾಂಜಲಿ
ಆರ್ಎಸ್ಎಸ್
Rss tribute


ಬೆಂಗಳೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಾಡಿನ ಹಿರಿಯ ಸಾಹಿತಿ, ಸಂಶೋಧಕ, ವಿದ್ವಾಂಸ ಹಾಗೂ ಪತ್ರಕರ್ತ ನಾಡೋಜ ಡಾ|| ಎಸ್. ಆರ್. ರಾಮಸ್ವಾಮಿ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಕ್ಷೇತ್ರೀಯ ಸಂಘಚಾಲಕ ಡಾ| ಪಿ. ವಾಮನ್ ಶೆಣೈ ಅವರು, ರಾಮಸ್ವಾಮಿಯವರ ಅಗಲಿಕೆ ನಾಡಿನ ಸಾಂಸ್ಕೃತಿಕ, ವೈಚಾರಿಕ ಹಾಗೂ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಆರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಮಸ್ವಾಮಿಯವರು, 1966ರಿಂದ ರಾಷ್ಟೋತ್ಥಾನ ಪರಿಷತ್ತಿನೊಂದಿಗೆ ದೀರ್ಘಕಾಲದ ನಂಟು ಹೊಂದಿದ್ದರು. ಸಂಸ್ಥೆಯ ಅಧ್ಯಕ್ಷರಾಗಿ, ‘ಉತ್ಥಾನ’ ಮಾಸಪತ್ರಿಕೆ ಹಾಗೂ ರಾಷ್ಟೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾಗಿ ಅವರು ಮಹತ್ವದ ಪಾತ್ರವಹಿಸಿದ್ದರು.

50ಕ್ಕೂ ಹೆಚ್ಚು ಗ್ರಂಥಗಳು ಹಾಗೂ ಸಾವಿರಕ್ಕೂ ಅಧಿಕ ಲೇಖನಗಳ ಮೂಲಕ ಭಾರತೀಯ ವೈಚಾರಿಕ ಪರಂಪರೆಯನ್ನು ಜನಮಾನಸಕ್ಕೆ ತಲುಪಿಸಿದ ರಾಮಸ್ವಾಮಿಯವರು, ಸಾಹಿತ್ಯ, ಸಮಾಜ, ಆರ್ಥಿಕತೆ, ಪರಿಸರ ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಡಿ.ವಿ.ಜಿ. ಅವರ ಶಿಷ್ಯರಾಗಿದ್ದ ಅವರು, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚಟುವಟಿಕೆಗಳ ಮೂಲಕ ವೈಚಾರಿಕ ಚಳವಳಿಗೆ ಬಲ ತುಂಬಿದ್ದರು. ಸರಳ ಜೀವನ, ಕ್ರಿಯಾಶೀಲತೆ ಹಾಗೂ ಸಮಾಜಮುಖಿ ಬರಹಗಳ ಮೂಲಕ ಮುಂದಿನ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿ ಉಳಿದಿದ್ದಾರೆ ಎಂದು ಪ್ರಕಟಣೆಯಲ್ಲಿ ಸ್ಮರಿಸಲಾಗಿದೆ.

ರಾಮಸ್ವಾಮಿಯವರ ನಿಧನದಿಂದ ದುಃಖಿತ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಹಾಗೂ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂಘದ ನಾಯಕರು ಪ್ರಾರ್ಥಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande