ಚಿಕ್ಕಮಗಳೂರು ಮಾಣಿಕ್ಯಧಾರಾ ಪರ್ವತದಲ್ಲಿ ನಾಪತ್ತೆಯಾದ ಕೇರಳಂ ಬಾಲಕಿ ಶವವಾಗಿ ಪತ್ತೆ
ಚಿಕ್ಕಮಗಳೂರು, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ವ್ಯಾಪ್ತಿಯ ಮಾಣಿಕ್ಯಧಾರಾ ಜಲಪಾತ ಬಳಿ ಮಂಗಳವಾರ (ಏಪ್ರಿಲ್ 7) ಕಾಣೆಯಾಗಿದ್ದ ಕೇರಳಂ ಪಾಲಕ್ಕಾಡ್ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೃತದೇಹವಾಗಿ ಪತ್ತೆಯಾಗಿದ್ದು, ನಾಲ್ಕು ದಿನಗಳ ತೀವ್ರ ಶೋಧ ಕಾರ್ಯಾಚರಣೆಗೆ ದುಃ
ಶ್ರೀನಂದಾ


ಚಿಕ್ಕಮಗಳೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ವ್ಯಾಪ್ತಿಯ ಮಾಣಿಕ್ಯಧಾರಾ ಜಲಪಾತ ಬಳಿ ಮಂಗಳವಾರ (ಏಪ್ರಿಲ್ 7) ಕಾಣೆಯಾಗಿದ್ದ ಕೇರಳಂ ಪಾಲಕ್ಕಾಡ್ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೃತದೇಹವಾಗಿ ಪತ್ತೆಯಾಗಿದ್ದು, ನಾಲ್ಕು ದಿನಗಳ ತೀವ್ರ ಶೋಧ ಕಾರ್ಯಾಚರಣೆಗೆ ದುಃಖಕರ ಅಂತ್ಯ ಕಂಡಿದೆ.

ಅರಿಶಿಣಗುಪ್ಪೆ ದಿಕ್ಕಿನಿಂದ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ, ಮಾಣಿಕ್ಯಧಾರಾ ಪರ್ವತ ಸಾಲಿನಲ್ಲಿ ಸುಮಾರು 2000 ಅಡಿ ಆಳದ ಕಂದಕದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಂದಾ ಕುಟುಂಬದವರೊಂದಿಗೆ ಪ್ರವಾಸಕ್ಕೆಂದು ಚಂದ್ರದ್ರೋಣ ಪರ್ವತ ಶ್ರೇಣಿಗೆ ಬಂದಿದ್ದಳು. ಮಂಗಳವಾರ ಸಂಜೆ 5:30ರ ತನಕ ಕುಟುಂಬ ಸದಸ್ಯರೊಂದಿಗೆ ಇದ್ದ ಬಾಲಕಿ, ಮಾಣಿಕ್ಯಧಾರಾ ಜಲಪಾತದ ಬಳಿ ಫೋಟೋ ತೆಗೆಸಿಕೊಂಡು, ತಂದೆಯ ಮೊಬೈಲ್ನಲ್ಲಿ ಸಂಬಂಧಿಕರೊಂದಿಗೆ ರೀಲ್ಸ್ ಮಾಡಿದ್ದಳು. ಆದರೆ ನಂತರ ಜಲಪಾತದ ಮೆಟ್ಟಿಲುಗಳನ್ನು ಇಳಿದು ಬರುವಾಗ ಹಠಾತ್ತನೆ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು.

ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಭಾರೀ ಪ್ರಮಾಣದಲ್ಲಿ ಕೈಗೊಳ್ಳಲಾಗಿತ್ತು. ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ 70ಕ್ಕೂ ಹೆಚ್ಚು ಸಿಬ್ಬಂದಿ ಹಲವು ತಂಡಗಳಾಗಿ ವಿಭಜನೆಗೊಂಡು ಕಾಡು ಪ್ರದೇಶಗಳು, ಕಡಿದಾದ ಗುಡ್ಡಗಳು ಹಾಗೂ ಕಂದಕಗಳಲ್ಲಿ ಶೋಧ ನಡೆಸಿದರು. ಡಾಗ್ ಸ್ಕ್ವಾಡ್, ಡ್ರೋನ್ ಮತ್ತು ಥರ್ಮಲ್ ಡ್ರೋನ್ಗಳನ್ನು ಸಹ ಬಳಸಲಾಯಿತು. ಎಸ್ಡಿಆರ್ಎಫ್ ತಂಡವೂ ಕಾರ್ಯಾಚರಣೆಗೆ ಕೈಜೋಡಿಸಿತ್ತು.

ಈ ದುರ್ಘಟನೆ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದು, ಅವರ ಆಕ್ರಂದನ ಮನಕಲುಕುವಂತಿದೆ. ಬಾಲಕಿ ಕಂದಕಕ್ಕೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದಳೇ ಅಥವಾ ಬೇರೆ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ನಿಖರ ಕಾರಣ ತಿಳಿಯಲಿದೆ.

ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande