
ನವದೆಹಲಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳ ಎಲ್ಪಿಜಿ ಗ್ಯಾಸ್ ಸರಬರಾಜಿನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನವದೆಹಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ಆಟೋ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಎಲ್ಪಿಜಿ ಗ್ಯಾಸ್ ಸರಬರಾಜಿನಲ್ಲಿ ಕಂಡುಬರುತ್ತಿರುವ ಹಲವು ತೊಂದರೆಗಳ ಕುರಿತು ಚರ್ಚೆ ನಡೆಯಿತು. ಆಟೋ ಗ್ಯಾಸ್ ದರದಲ್ಲಿ ಏರಿಕೆ, ಗ್ಯಾಸ್ ರಸೀದಿ ನೀಡದಿರುವುದು, ಲಭ್ಯತೆ ಇದ್ದರೂ ಸಮರ್ಪಕ ಸರಬರಾಜು ಮಾಡದಿರುವುದು ಹಾಗೂ ದರ ಪ್ರದರ್ಶನದ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಸಚಿವರು, ಎಲ್ಪಿಜಿ ಸರಬರಾಜಿನ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವಂತೆ ನಿರ್ದೇಶಿಸಿದರು. ಈ ಅಧಿಕಾರಿಗೆ ಸರಬರಾಜಿನ ಮೇಲ್ವಿಚಾರಣೆ, ಮಾಹಿತಿಯ ಸಂಗ್ರಹಣೆ ಹಾಗೂ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿ ನೀಡಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿ ನಿಯಮಿತವಾಗಿ ಪರಿಸ್ಥಿತಿಯ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವ ಜೊತೆಗೆ, ಆಟೋ ಚಾಲಕರಿಗೆ ಎಲ್ಪಿಜಿ ಗ್ಯಾಸ್ ಸುಗಮವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa