
ಗದಗ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜನಗಣತಿ ಕಾರ್ಯವನ್ನು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಗದಗ ನಗರ ಮತ್ತು ಗ್ರಾಮೀಣ ಭಾಗಗಳ ಗಣತಿದಾರರಿಗೆ ಮೂರು ದಿನಗಳ ಸಮಗ್ರ ತರಬೇತಿ ಕಾರ್ಯಕ್ರಮವನ್ನು ನಗರದ ಗುರುಬಸವ ಪ್ರೌಢಶಾಲೆಯಲ್ಲಿ ಆರಂಭವಾಗಿದೆ.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರ ಮಾರ್ಗದರ್ಶನದಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಗಣತಿದಾರರಿಗೆ ಕಾರ್ಯಪದ್ಧತಿ, ಮಾಹಿತಿಯ ಸಂಗ್ರಹಣೆ ವಿಧಾನಗಳು, ತಂತ್ರಜ್ಞಾನ ಬಳಕೆ ಹಾಗೂ ಕ್ಷೇತ್ರ ಮಟ್ಟದ ಸವಾಲುಗಳನ್ನು ಎದುರಿಸುವ ಬಗ್ಗೆ ವಿವರವಾದ ಮಾರ್ಗದರ್ಶನ ನೀಡಲಾಯಿತು.
ತರಬೇತಿಯಲ್ಲಿ ಗಣತಿದಾರರಿಗೆ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ವಿಧಾನ, ಪ್ರತಿ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ದಾಖಲಿಸುವ ಕ್ರಮ, ಮಾಹಿತಿಯ ನಿಖರತೆ ಕಾಪಾಡುವ ಅಗತ್ಯತೆ ಹಾಗೂ ಗೌಪ್ಯತೆ ಕಾಯ್ದುಕೊಳ್ಳುವ ಮಹತ್ವವನ್ನು ವಿವರಿಸಲಾಯಿತು. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಮೂಲಕ ಮಾಹಿತಿ ದಾಖಲಿಸುವ ವಿಧಾನಗಳನ್ನೂ ಪರಿಚಯಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು, ಜನಗಣತಿ ದೇಶದ ಯೋಜನೆ ರೂಪಿಸುವ ಮೂಲಭೂತ ಆಧಾರವಾಗಿದ್ದು, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಯೋಜನೆಗಳು ರೂಪಗೊಳ್ಳಲು ಇದರ ಮಾಹಿತಿ ಬಹುಮುಖ್ಯವಾಗುತ್ತದೆ ಎಂದು ಹೇಳಿದರು. ಆದ್ದರಿಂದ ಗಣತಿದಾರರು ಯಾವುದೇ ರೀತಿಯ ತಪ್ಪಿಲ್ಲದೆ, ಶಿಸ್ತು ಮತ್ತು ಸಂಯಮದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಜನರ ಸಹಕಾರವಿಲ್ಲದೆ ಗಣತಿ ಕಾರ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದನ್ನು ಉಲ್ಲೇಖಿಸಿದ ಅವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಗಣತಿದಾರರು ಪ್ರಮುಖ ಪಾತ್ರವಹಿಸಬೇಕು ಎಂದು ಹೇಳಿದರು.
ಪ್ರತಿ ಮನೆಗೂ ಭೇಟಿ ನೀಡುವಾಗ ಸಹಾನುಭೂತಿಯೊಂದಿಗೆ, ಗೌರವದಿಂದ ವರ್ತಿಸುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಅವರು ಮಾತನಾಡಿ, ಜನಗಣತಿ ಪ್ರಕ್ರಿಯೆ ದೇಶದ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ಸಾಧನವಾಗಿದ್ದು, ಸಂಗ್ರಹವಾಗುವ ಪ್ರತಿಯೊಂದು ಮಾಹಿತಿ ಭವಿಷ್ಯದ ಯೋಜನೆಗಳಿಗೆ ಮಾರ್ಗಸೂಚಿಯಾಗುತ್ತದೆ ಎಂದು ಹೇಳಿದರು. ಆದ್ದರಿಂದ ಯಾವುದೇ ಅಸಡ್ಡೆ ತೋರದೆ, ನಿಖರ ಹಾಗೂ ಪೂರ್ಣ ಮಾಹಿತಿಯನ್ನು ಸಂಗ್ರಹಿಸುವAತೆ ಗಣತಿದಾರರಿಗೆ ಸೂಚಿಸಿದರು.
ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಅವರು ಮಾತನಾಡಿ, ಜನಗಣತಿ ಕಾರ್ಯ ರಾಷ್ಟçದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಸರಿಯಾದ ಮಾಹಿತಿ ಆಧಾರದ ಮೇಲೆ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದರಿಂದ, ಪ್ರತಿಯೊಬ್ಬ ಗಣತಿದಾರರೂ ತಮ್ಮ ಜವಾಬ್ದಾರಿಯನ್ನು ಅರಿತು, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಶೀಲ್ದಾರ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಪರಶುರಾಮ್ ಶೇರಖಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗಣತಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.
ಒಟ್ಟಾರೆಯಾಗಿ, ಈ ಮೂರು ದಿನಗಳ ತರಬೇತಿ ಗಣತಿದಾರರಿಗೆ ಕಾರ್ಯನಿರ್ವಹಣೆಯ ಕುರಿತ ಸ್ಪಷ್ಟತೆ ನೀಡುವುದರ ಜೊತೆಗೆ, ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಗತ್ಯವಾದ ಆತ್ಮವಿಶ್ವಾಸವನ್ನು ತುಂಬಿತು.
ಹಿಂದೂಸ್ತಾನ್ ಸಮಾಚಾರ್ / lalita MP