
ಬೆಂಗಳೂರು, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ರಾಷ್ಟ್ರೀಯ ಜನಗಣತಿ ಜಾಗೃತಿ ಸಭೆ ನಡೆಯಿತು.
ಮಾದರ ಮಹಾಸಭೆಯ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಸಮುದಾಯದವರು ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡಿದರು.
ಸಮುದಾಯದ ಮಹಾನ್ ನಾಯಕರಾದ ಬಿ.ಅರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರ ಹುಟ್ಟುಹಬ್ಬಗಳನ್ನು ಬೇರೆಬೇರೆವಾಗಿ ಆಚರಿಸುವುದು ಸೂಕ್ತವಲ್ಲ ಎಂದು ಹೇಳಿದರು. “ಇಬ್ಬರೂ ನಮ್ಮ ಸಮುದಾಯದ ಎರಡು ಕಣ್ಣುಗಳಂತೆ” ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತ ನಾಯಕರಲ್ಲ ಅವರು ದೇಶದ ಎಲ್ಲಾ ಸಮುದಾಯಗಳ ನಾಯಕರಾಗಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು. ಪರಿಶಿಷ್ಟ ಜಾತಿಯ ಸಮುದಾಯದವರು ಯಾವುದೇ ಕಾರಣಕ್ಕೂ ಗಲಭೆಗಳಿಗೆ ಕಾರಣವಾಗಬಾರದು ಎಂದು ಸಲಹೆ ನೀಡಿದರು.
ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಸಚಿವರು, ಈ ಕುರಿತು ಜಿ.ಪರಮೇಶ್ವರ ಮತ್ತು ಎಚ್.ಸಿ.ಮಹಾದೇವಪ್ಪ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಹೇಳಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಕಾರ್ಯದಲ್ಲಿ ಭಾಗವಹಿಸಿ ಮಾದರ ಮಹಾಸಭೆಯ ಸದಸ್ಯರಾಗಬೇಕೆಂದು ಕರೆ ನೀಡಿದರು. ಮೊಬೈಲ್ ಅಪ್ಲಿಕೇಶನ್ ಮೂಲಕ ನೇರವಾಗಿ ನೋಂದಣಿ ಮಾಡುವಂತೆ ಸೂಚಿಸಿದರು.
ಮುಂದಿನ 15 ದಿನಗಳ ಕಾಲ ಸಮುದಾಯದ ಮುಖಂಡರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಜನಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸರಿಯಾದ ಜನಗಣತಿ ನಡೆದಾಗ ಮಾತ್ರ ಸಮುದಾಯದ ನಿಖರ ಜನಸಂಖ್ಯೆ ತಿಳಿಯಲಿದೆ ಎಂದು ಸಚಿವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa