
ಕಲಬುರಗಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲಬುರಗಿ ನಗರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಕಲಬುರಗಿ ನಗರದ ಐತಿಹಾಸಿಕ ಕೋಟೆಯ ಸಂರಕ್ಷಣೆ, ಉದ್ಯಾನವನಗಳ ಸೌಂದರ್ಯೀಕರಣ ಹಾಗೂ ವಾಹನ ದಟ್ಟಣೆಯ ಸಮರ್ಪಕ ನಿರ್ವಹಣೆ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ನಗರಾಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಸಚಿವರು ಸೂಚಿಸಿದರು.
ಬೆಂಗಳೂರು ಮೂಲದ ಆರ್ಕಿಟೆಕ್ಟ್ ಹಾಗೂ ಸಿವಿಲ್ ಎಂಜಿನಿಯರ್ಗಳ ತಂಡದೊಂದಿಗೆ ರಸ್ತೆ ವಿಸ್ತರಣೆ, ಫ್ಲೈಓವರ್ ನಿರ್ಮಾಣ ಹಾಗೂ ಹುಬ್ಬಳ್ಳಿ-ಧಾರವಾಡ ಮಾದರಿಯ ಬಿಆರ್ಟಿಸಿ ಬಸ್ ಸಂಚಾರ ವ್ಯವಸ್ಥೆಯನ್ನು ಕಲಬುರಗಿಯಲ್ಲಿ ಜಾರಿಗೊಳಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು.
ಐತಿಹಾಸಿಕ ಕೋಟೆ ಸಂರಕ್ಷಣೆ, ಅಪ್ಪಾ ಕೆರೆ ಮತ್ತು ಭೋಸಗಾ ಕೆರೆಗಳ ಅಭಿವೃದ್ಧಿ, ನಗರದ ಪ್ರಮುಖ ಉದ್ಯಾನವನಗಳ ಸೌಂದರ್ಯೀಕರಣ ಹಾಗೂ ವಿವಿಧ ವೃತ್ತಗಳ ವಿಸ್ತರಣೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಲೋಕೋಪಯೋಗಿ ಇಲಾಖೆ, ಜೆಸ್ಕಾಂ, ಕಂದಾಯ ಇಲಾಖೆ, ಕೆಕೆಆರ್ಟಿಸಿ ಹಾಗೂ ಕುಡಾ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಟಾಸ್ಕ್ಫೋರ್ಸ್ ರಚಿಸಲು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು. ಈ ಕಾರ್ಯಪಡೆ ನಿರಂತರವಾಗಿ ಸಭೆ ನಡೆಸಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಕಲಬುರಗಿಯನ್ನು ಸ್ವಚ್ಛ, ಸುಂದರ ನಗರವನ್ನಾಗಿ ಹಾಗೂ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa