ರಾಷ್ಟ್ರಪತಿ ಶಿಷ್ಟಾಚಾರ ಉಲ್ಲಂಘನೆ ಆರೋಪ: ಬಂಗಾಳ ಸರ್ಕಾರದಿಂದ ಗೃಹ ಸಚಿವಾಲಯಕ್ಕೆ ಸ್ಪಷ್ಟೀಕರಣ ವರದಿ
ಕೋಲ್ಕತ್ತಾ, 09 ಮಾರ್ಚ್ (ಹಿ.ಸ.): ಆ್ಯಂಕರ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಇತ್ತೀಚಿನ ಉತ್ತರ ಬಂಗಾಳ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘನೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೋರಿದ್ದ ಸ್ಪಷ್ಟೀಕರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ತನ್ನ ವರದಿಯನ್ನು ಸಲ್ಲಿಸಿದೆ. ರಾಜ್ಯ ಸ
ರಾಷ್ಟ್ರಪತಿ ಶಿಷ್ಟಾಚಾರ ಉಲ್ಲಂಘನೆ ಆರೋಪ: ಬಂಗಾಳ ಸರ್ಕಾರದಿಂದ ಗೃಹ ಸಚಿವಾಲಯಕ್ಕೆ ಸ್ಪಷ್ಟೀಕರಣ ವರದಿ


ಕೋಲ್ಕತ್ತಾ, 09 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಇತ್ತೀಚಿನ ಉತ್ತರ ಬಂಗಾಳ ಭೇಟಿ ವೇಳೆ ಶಿಷ್ಟಾಚಾರ ಉಲ್ಲಂಘನೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೋರಿದ್ದ ಸ್ಪಷ್ಟೀಕರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ತನ್ನ ವರದಿಯನ್ನು ಸಲ್ಲಿಸಿದೆ. ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಲೋಪ ನಡೆದಿಲ್ಲ ಎಂದು ಹೇಳಿ, ಸ್ಥಳೀಯ ಅಧಿಕಾರಿಗಳು ನಿಗದಿತ ಶಿಷ್ಟಾಚಾರ ಪ್ರಕಾರವೇ ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಮೂಲಗಳ ಪ್ರಕಾರ, ಗೃಹ ಸಚಿವಾಲಯವು ಭಾನುವಾರ ಬೆಳಿಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅವರ ಕಚೇರಿಯಿಂದ ವಿವರವಾದ ವರದಿಯನ್ನು ಕೋರಿದ್ದು, ಅದೇ ದಿನ ಸಂಜೆ 5 ಗಂಟೆಯೊಳಗೆ ಸ್ಪಷ್ಟೀಕರಣ ನೀಡಲು ಗಡುವು ನೀಡಿತ್ತು. ರಾಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ವರದಿ ಕಳುಹಿಸಿರುವುದನ್ನು ದೃಢಪಡಿಸಿದ್ದು, ಸಚಿವಾಲಯ ಎತ್ತಿದ ಎಲ್ಲಾ ಪ್ರೋಟೋಕಾಲ್ ವಿಷಯಗಳ ಬಗ್ಗೆ ಹಂತ ಹಂತವಾಗಿ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವರದಿಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಿಲ್ಲ.

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಾಷ್ಟ್ರಪತಿಗಳು ಆಗಮಿಸಿದಾಗ ಶಿಷ್ಟಾಚಾರದ ಪ್ರಕಾರವೇ ಸ್ವಾಗತ ನೀಡಲಾಗಿದೆ ಎಂದು ಹೇಳಿದ್ದಾರೆ. ಅವರ ಪ್ರಕಾರ,ಗೌತಮ ದೇಬ್ ಡಾರ್ಜಿಲಿಂಗ್ ಜಿಲ್ಲೆಯ ಜಿಲ್ಲಾಾಧಿಕಾರಿ ಮತ್ತು ಸಿಲಿಗುರಿ ಮೆಟ್ರೋಪಾಲಿಟನ್ ಪೊಲೀಸ್ ಆಯುಕ್ತರು ಅಲ್ಲಿ ಹಾಜರಿದ್ದರು. ಮುಖ್ಯಮಂತ್ರಿಯಾಗಿ ತಮ್ಮನ್ನು ಸ್ವಾಗತಿಸಲು ಅಥವಾ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲು ಯಾವುದೇ ಪೂರ್ವ ಯೋಜನೆ ಇರಲಿಲ್ಲ, ಆದ್ದರಿಂದ ಶಿಷ್ಟಾಚಾರ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರಪತಿಗಳ ಉತ್ತರ ಬಂಗಾಳ ಭೇಟಿ ಮೂಲತಃ ಶುಕ್ರವಾರ ಮಧ್ಯಾಹ್ನಕ್ಕೆ ನಿಗದಿಯಾಗಿದ್ದರೂ, ಅನಿವಾರ್ಯ ಕಾರಣಗಳಿಂದ ಅದು ಮುಂದೂಡಲ್ಪಟ್ಟಿತ್ತು. ನಂತರ ಶನಿವಾರ ಬೆಳಿಗ್ಗೆ ಸುಮಾರು 11:30ಕ್ಕೆ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿದೇವಾ ಪ್ರದೇಶದಲ್ಲಿ ನಡೆಯಲಿದ್ದ ಬುಡಕಟ್ಟು ಸಮುದಾಯದ ಕಾರ್ಯಕ್ರಮದ ಸ್ಥಳವನ್ನು ನಂತರ ಗೋಸಾಯಿಪುರಕ್ಕೆ ಬದಲಾಯಿಸಲಾಗಿದ್ದು, ಈ ಬದಲಾವಣೆ ವಿವಾದಕ್ಕೆ ಕಾರಣವಾಯಿತು.

ಈ ನಡುವೆ, ರಾಷ್ಟ್ರಪತಿಗಳು ಕಾರ್ಯಕ್ರಮದ ವೇಳೆ ರಾಜ್ಯ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು “ತಂಗಿಯಂತೆ” ಎಂದು ಹೇಳಿದ ಅವರು, ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಅಥವಾ ಸಚಿವ ಸಂಪುಟದ ಯಾವುದೇ ಸದಸ್ಯರು ಭೇಟಿಯಾಗದಿರುವುದು ಸಾಂಪ್ರದಾಯಿಕ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಹೇಳಿಕೆಯ ನಂತರ ರಾಜ್ಯದ ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡವು. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ರಾಜ್ಯ ಸರ್ಕಾರದಿಂದ ಅಧಿಕೃತ ಸ್ಪಷ್ಟೀಕರಣವನ್ನು ಕೋರಿತ್ತು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande