
ನವದೆಹಲಿ, 09 ಮಾರ್ಚ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ “ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ – ಜನರ ಆಕಾಂಕ್ಷೆಗಳನ್ನು ಈಡೇರಿಸುವುದು” ಎಂಬ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಕಚೇರಿ ಮಾಹಿತಿ ಪ್ರಕಾರ, ಈ ವೆಬಿನಾರ್‌ನಲ್ಲಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆರೋಗ್ಯ ಮತ್ತು ಆಯುಷ್, ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಕುರಿತು ಅಧಿವೇಶನಗಳು ನಡೆಯಲಿವೆ.
ಈ ಅಧಿವೇಶನಗಳಲ್ಲಿ ಶಿಕ್ಷಣದಿಂದ ಉದ್ಯೋಗದವರೆಗೆ ಬಲವಾದ ಸಂಪರ್ಕ ನಿರ್ಮಿಸುವುದು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲಿ ವಿಷಯ ಸೃಷ್ಟಿಕರ್ತರಿಗೆ ಪ್ರಯೋಗಾಲಯಗಳನ್ನು ಸ್ಥಾಪಿಸುವುದು, ಸಂಬಂಧಿತ ಆರೋಗ್ಯ ವೃತ್ತಿಪರರು ಹಾಗೂ ಆರೈಕೆದಾರರಿಗೆ ತರಬೇತಿ ವಿಸ್ತರಣೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದಲ್ಲದೆ ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳ ಸ್ಥಾಪನೆ, ಹೊಸ ಆಯುಷ್ ಸಂಸ್ಥೆಗಳ ಆರಂಭ, ಆತಿಥ್ಯ ವಲಯದಲ್ಲಿ ಕೌಶಲ್ಯಾಭಿವೃದ್ಧಿ, ಸುಸ್ಥಿರ ಪ್ರವಾಸೋದ್ಯಮ ಮಾರ್ಗಗಳ ಅಭಿವೃದ್ಧಿ, ಬೌದ್ಧ ಪ್ರವಾಸಿ ವಲಯಗಳ ಉತ್ತೇಜನ ಮತ್ತು ಈಶಾನ್ಯ ಪ್ರದೇಶದಲ್ಲಿ ಪರಂಪರೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ವಿಚಾರಗಳೂ ಚರ್ಚೆಗೆ ಬರಲಿವೆ.
ಬಜೆಟ್ ನಂತರದ ಈ ವೆಬಿನಾರ್ ಸರ್ಕಾರ, ಉದ್ಯಮ ವಲಯ ಮತ್ತು ವಿವಿಧ ಕ್ಷೇತ್ರಗಳ ತಜ್ಞರ ನಡುವಿನ ಸಹಕಾರ ಸಂವಾದಕ್ಕೆ ವೇದಿಕೆಯಾಗಲಿದೆ. ಬಜೆಟ್‌ನಲ್ಲಿ ಘೋಷಿಸಲಾದ ನೀತಿಗಳನ್ನು ಪರಿಣಾಮಕಾರಿ ಕಾರ್ಯತಂತ್ರಗಳಾಗಿ ರೂಪಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಈ ಚರ್ಚೆಗಳ ಮೂಲಕ ಪರಿಣಾಮಕಾರಿ ನೀತಿ ಅನುಷ್ಠಾನಕ್ಕೆ ನೆರವಾಗುವ ಸಲಹೆಗಳು ಹೊರಬರುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa