
ನವದೆಹಲಿ, 09 ಮಾರ್ಚ್ (ಹಿ.ಸ.):
ಆ್ಯಂಕರ್:
ಕೇಂದ್ರ ಬಜೆಟ್ ಅಧಿವೇಶನದ ಎರಡನೇ ಹಂತ ಇಂದು ಆರಂಭವಾಗುತ್ತಿದೆ. ಈ ಅಧಿವೇಶನವು ಏಪ್ರಿಲ್ 2ರವರೆಗೆ ನಡೆಯಲಿದೆ. ಮೊದಲ ದಿನವೇ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಈ ನಿರ್ಣಯವನ್ನು ವಿರೋಧ ಪಕ್ಷದ ಸಂಸದರಾದ ಮೊಹಮ್ಮದ್ ಜಾವೇದ್, ಕೆ.ಸುರೇಶ್ ಮತ್ತು ಮಲ್ಲು ರವಿ ಸದನದಲ್ಲಿ ಮಂಡಿಸಲಿದ್ದಾರೆ.
ಇದರ ನಡುವೆ ಬಿಜೆಪಿ ಮಾರ್ಚ್ 9 ಮತ್ತು 10ರಂದು ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಕಾಂಗ್ರೇಸ ಕೂಡಾ ಮಾರ್ಚ್ 9ರಿಂದ 11ರವರೆಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ತನ್ನ ಎಲ್ಲಾ ಸದಸ್ಯರಿಗೆ ವಿಪ್ ನೀಡಿದೆ.
ಕಳೆದ ತಿಂಗಳು ನಡೆದ ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ, ಸ್ಪೀಕರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಸ್ಥಾನದಿಂದ ತೆಗೆದುಹಾಕಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಅವಿಶ್ವಾಸ ನಿರ್ಣಯದ ನೋಟಿಸ್ ಸಲ್ಲಿಸಲಾಗಿತ್ತು. ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಎಡಪಕ್ಷಗಳು ಸೇರಿದಂತೆ ಹಲವು ವಿರೋಧ ಪಕ್ಷಗಳ ಒಟ್ಟು 118 ಸಂಸದರು ಈ ನಿರ್ಣಯಕ್ಕೆ ಸಹಿ ಹಾಕಿದ್ದರು.
ಇಂದಿನ ಚರ್ಚೆಯ ವೇಳೆ ಬಿರ್ಲಾ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪೀಕರ್ ಸ್ಥಾನದಿಂದಲ್ಲದೆ, ಆಡಳಿತ ಪಕ್ಷದ ಸದಸ್ಯರೊಂದಿಗೆ ಸದನದಲ್ಲಿ ಕುಳಿತು ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಸದನದ ಕಲಾಪಗಳನ್ನು ಅಧ್ಯಕ್ಷರ ಸಮಿತಿಯ ಸದಸ್ಯರು ನಡೆಸಲಿದ್ದಾರೆ. ಪ್ರಸ್ತುತ ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನ ಖಾಲಿಯಿರುವುದರಿಂದ, ಸಮಿತಿಯಲ್ಲಿರುವ ಸಂಸದರು ಸಭೆಯನ್ನು ನಡೆಸುವರು.
ಇದೇ ವೇಳೆ ತೃಣಮೂಲ ಕಾಂಗ್ರೆಸ್ ಕೂಡ ಪ್ರತಿಪಕ್ಷಗಳ ನಿಲುವಿಗೆ ಬೆಂಬಲ ಘೋಷಿಸಿದೆ. ಈ ಪಕ್ಷದ 29 ಸಂಸದರು ಲೋಕಸಭೆಯಲ್ಲಿ ಇದ್ದಾರೆ.
ನಿಯಮಗಳ ಪ್ರಕಾರ, ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯವು ಸದನದಲ್ಲಿ ಸರಳ ಬಹುಮತದಿಂದ ಅಂಗೀಕರಿಸಬೇಕು. ಆದರೆ ಪ್ರಸ್ತುತ ಲೋಕಸಭೆಯಲ್ಲಿ ಎನ್‌ಡಿಎ 290 ಕ್ಕೂ ಹೆಚ್ಚು ಸಂಸದರ ಬೆಂಬಲ ಹೊಂದಿರುವುದರಿಂದ ಈ ನಿರ್ಣಯ ಅಂಗೀಕಾರವಾಗುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa