
ನವದೆಹಲಿ, 08 ಮಾರ್ಚ್ (ಹಿ.ಸ.):
ಆ್ಯಂಕರ್:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ “ಶಕ್ತಿ ನಡಿಗೆ” ಕಾರ್ಯಕ್ರಮ ಮಹಿಳಾ ಶಕ್ತಿಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಶಕ್ತಿ ನಡಿಗೆಗೆ ಚಾಲನೆ ನೀಡಿದರು. ಈ ವೇಳೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ರಾಜ್ಯ ಸಚಿವೆ ಸಾವಿತ್ರಿಬಾಯಿ ಠಾಕೂರ್, ಅನುಪ್ರಿಯಾ ಪಟೇಲ್, ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಾಹತ್ಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಡಿಗೆಯಲ್ಲಿ ಭಾಗವಹಿಸಿದ ಮಹಿಳೆಯರು ಇಂಡಿಯಾ ಗೇಟ್ ನಿಂದ ವಿಜಯ ಚೌಕವರೆಗೆ ನಡೆದು ಮಹಿಳಾ ಸಬಲೀಕರಣದ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ನಪೂರ್ಣ ದೇವಿ ಅವರು, ಭಾರತದ ಮಹಿಳೆಯರು ಇಂದು ರಕ್ಷಣಾ, ವಿಜ್ಞಾನ, ಕ್ರೀಡೆ, ಉದ್ಯಮಶೀಲತೆ ಮತ್ತು ಆಡಳಿತ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಮೈಲುಗಲ್ಲುಗಳನ್ನು ಸಾಧಿಸುತ್ತಿದ್ದಾರೆ ಎಂದು ಹೇಳಿದರು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳು ಮತ್ತು ಅವಕಾಶಗಳು ಸೃಷ್ಟಿಯಾಗಿದ್ದು, ಮಹಿಳೆಯರು ರಾಷ್ಟ್ರ ನಿರ್ಮಾಣದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳಾ ಸಾಧನೆಗಳನ್ನು ಗೌರವಿಸುವ ಮತ್ತು ಸಮಾಜದಲ್ಲಿ ಮಹಿಳಾ ಶಕ್ತಿಯ ಮೇಲಿನ ನಂಬಿಕೆಯನ್ನು ಬಲಪಡಿಸುವ ದಿನವಾಗಿದೆ ಎಂದು ಹೇಳಿದರು. ಮಹಿಳೆಯರು ಸೈನ್ಯದಿಂದ ಪೊಲೀಸ್ ಸೇವೆ, ಆರೋಗ್ಯ ಸೇವೆಯಿಂದ ಕ್ರೀಡೆ, ಆಡಳಿತದಿಂದ ಸಮಾಜ ಸೇವೆ ತನಕ ಎಲ್ಲ ಕ್ಷೇತ್ರಗಳಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa