
ಕೋಲ್ಕತ್ತಾ, 08 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಬಂಗಾಳ ಸರ್ಕಾರ ರಾಷ್ಟ್ರಪತಿಗಳ ಶಿಷ್ಟಾಚಾರ ಪಾಲನೆಗೆ ವಿಫಲವಾಗಿದೆ ಎಂದು ಎಬಿವಿಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದ್ರೌಪದಿ ಮುರ್ಮು ಅವರ ಉತ್ತರ ಬಂಗಾಳ ಭೇಟಿಯ ಸಂದರ್ಭದಲ್ಲಿ ಸಂತಾಲ್ ಸಮುದಾಯ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನಕ್ಕೆ ಅನುಮತಿ ನಿರಾಕರಿಸಿದ ಕ್ರಮವನ್ನು ಎಬಿವಿಪಿ “ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ” ಎಂದು ಖಂಡಿಸಿದೆ.
ಎಬಿವಿಪಿ ಪ್ರಕಟಣೆಯ ಪ್ರಕಾರ, ರಾಷ್ಟ್ರಪತಿಗಳ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಸಹಕಾರ ದೊರೆಯಲಿಲ್ಲ. ಇದರಿಂದ ಸಮ್ಮೇಳನದ ಸ್ಥಳವನ್ನು ನಾಲ್ಕು ಬಾರಿ ಬದಲಾಯಿಸಬೇಕಾಯಿತು ಎಂಬ ಆರೋಪ ಕೇಳಿಬಂದಿದೆ. ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯ ಕಾರ್ಯಕ್ರಮಕ್ಕೆ ಈ ರೀತಿಯ ಅಡೆತಡೆಗಳು ಎದುರಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಪರಿಷತ್ ಹೇಳಿದೆ.
ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸಿಂಗ್ ಸೋಲಂಕಿ ಮಾತನಾಡಿ, ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ ಆಗದಿರುವುದು ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು. ರಾಜಕೀಯ ದ್ವೇಷದ ಹಿನ್ನೆಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಇದಲ್ಲದೆ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಈ ಘಟನೆಯ ಮೂಲಕ ಎಲ್ಲಾ ಮಿತಿಗಳನ್ನು ಮೀರಿ ನಡೆದುಕೊಂಡಿದೆ ಎಂದು ಎಬಿವಿಪಿ ಟೀಕಿಸಿದೆ. ರಾಷ್ಟ್ರಪತಿಗಳಿಗೆ ತೋರಿದ ಅಗೌರವಕ್ಕೆ ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪರಿಷತ್ತು ಒತ್ತಾಯಿಸಿದೆ
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa