


ಬಳ್ಳಾರಿ, 06 ಮಾರ್ಚ್ (ಹಿ.ಸ.)
ಆ್ಯಂಕರ್: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಮತ್ತು ಕಿಷ್ಕಿಂಧಾ ವಿಶ್ವವಿದ್ಯಾಲಯವು, ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 'ಜ್ಞಾನ ವಿನಿಮಯ'ದ ಒಪ್ಪಂದವನ್ನು ಮಾಡಿಕೊಂಡಿವೆ.
ಸುಕೋ ಬ್ಯಾಂಕ್ ನನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎಸ್. ರವಿಸುಧಾಕರ್ ಮತ್ತು ಕಿಷ್ಕಿಂಧಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಟಿ.ಎನ್. ನಾಗಭೂಷಣ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸುಕೋ ಬ್ಯಾಂಕ್ ನ ಅಧ್ಯಕ್ಷರಾದ ಮೋಹಿತ ಮಸ್ಕಿ ಅವರು, ಬ್ಯಾಂಕಿಂಗ್ ಮತ್ತು ಉನ್ನತ ಶಿಕ್ಷಣದ 'ಜ್ಞಾನ ವಿನಿಮಯ'ವನ್ನು ಉತ್ತೇಜಿಸಲಿಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಿಷ್ಕಿಂಧಾ ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಅಮರರಾಜ್ ಭೂಪಾಲ್ ಅವರು, ಕಿಷ್ಕಿಂಧಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಪ್ರಾಯೋಗಿಕ ಅನುಭವದ ಅವಕಾಶಗಳನ್ನು ಒದಗಿಸುವ ಶೈಕ್ಷಣಿಕ ಕಲಿಕೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಈ ಒಡಂಬಡಿಕೆ ಹೊಂದಿದೆ ಎಂದರು.
ಸುಕೋ ಬ್ಯಾಂಕ್, ಕಿಷ್ಕಿಂಧಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಗಳನ್ನು, ತಜ್ಞರ ವಿಶೇಷ ತರಬೇತಿಗಳನ್ನು ಏರ್ಪಡಿಸುವುದು, ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಸೌಲಭ್ಯಗಳನ್ನು ಒದಗಿಸುವುದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಐ (ಆರ್ಟಿಪಿಷಿಯಲ್ ಇಂಟಲಿಜೆನ್ಸಿ) ಬಳಕೆಯ ಸಂಶೋಧನಾಲಯ ಪ್ರಾರಂಭ ಸೇರಿ ಪೂರಕ ಚಟುವಟಿಕೆಗಳನ್ನು ನಿರ್ವಹಿಸಲಿದೆ.
ಕಿಷ್ಕಿಂಧಾ ವಿಶ್ವವಿದ್ಯಾಲಯವು ಕೂಡ, ಸುಕೋ ಬ್ಯಾಂಕ್ ನ ನೌಕರರಿಗೆ ವೃತ್ತಿ ನೈಪುಣ್ಯ ಹಾಗೂ ಗ್ರಾಹಕ ಸ್ನೇಹಿ ಸಂವಹನಾ ತರಬೇತಿಯನ್ನು ನೀಡಿ ಕೌಶಲ್ಯಗಳನ್ನು ಹೆಚ್ಚಿಸುವ ಜವಾಬ್ದಾರಿಗಳನ್ನು ನಿರ್ವಹಿಸಲಿದೆ.
ಸುಕೋ ಬ್ಯಾಂಕ್ ಮತ್ತು ಕಿಷ್ಕಿಂಧಾ ವಿಶ್ವವಿದ್ಯಾಲಯ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ, ಶೈಕ್ಷಣಿಕ ಪ್ರಕಟಣೆ ಸೇರಿ ವಿವಿಧ ಪೂರಕ ವಿಷಯಗಳ ಪರಿಣಿತಿಗೆ ಅವಕಾಶ ನೀಡಲು ಒಪ್ಪಂದದಲ್ಲಿ ಅವಕಾಶವಿದೆ.
ಕಿಷ್ಕಿಂಧಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಟಿ.ಎನ್. ನಾಗಭೂಷಣ ಅವರು, ಈ ಒಡಂಬಡಿಕೆಯಿಂದಾಗಿ ವಿದ್ಯಾರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಪರತೆಯನ್ನು, ಉದ್ಯೋಗ ಅವಕಾಶಗಳನ್ನು, ಬ್ಯಾಂಕಿಂಗ್ ಪ್ರವಾಸಗಳನ್ನು ಕೈಗೊಂಡು ಹಣಕಾಸು ಕ್ಷೇತ್ರದ ದೈನಂದಿನ ಬೆಳವಣಿಗೆಗಳನ್ನು ತ್ವರಿತವಾಗಿ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ ಎಂದರು.
ಸುಕೋ ಬ್ಯಾಂಕನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಕೃಷ್ಣ ಚಿತ್ತಿಭಟ್ಟ, ಕಿಷ್ಕಿಂಧಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಅರುಣ್ ಚಂದ್ರ .ಎಂ, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸಾವಿತ್ರಿ ಮಸ್ಕಿ ಮತ್ತು ವಾಣಿಜ್ಯ ವಿಭಾಗದ ಸಂಯೋಜಕರಾದ ವಿಜಯಭಾಸ್ಕರ್ ರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್