
ಗದಗ, 06 ಮಾರ್ಚ್ (ಹಿ.ಸ.)
ಆ್ಯಂಕರ್:- ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತಡರಾತ್ರಿ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಶಿವಪ್ಪ, ಮುತ್ತಪ್ಪ ಹಾಗೂ ಆನಂದ ಎಂಬವರು ಮೃತಪಟ್ಟ ದುರ್ದೈವಿಗಳು. ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮೂವರಲ್ಲಿ ಇಬ್ಬರು ಜಂತ್ಲಿ ಗ್ರಾಮದವರಾಗಿದ್ದು, ಮತ್ತೊಬ್ಬರು ಹುಲಕೋಟಿ ಗ್ರಾಮದ ನಿವಾಸಿ ಆನಂದ ಎಂದು ತಿಳಿದುಬಂದಿದೆ.
ಮೃತರು ಮುಂಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮದ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಡೋಣಿ ಗ್ರಾಮದಿಂದ ಮುಂಡರಗಿ ಕಡೆಗೆ ಬರುತ್ತಿದ್ದ ಕಾರು ಎದುರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೆ ಕಾರಣವಾದ ಕಾರು ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಗ್ರಾಮದ ಹಾಲೇಶ್ವರ ಮಠದ ಹಾಲಸೋಮೇಶ್ವರ ಸ್ವಾಮೀಜಿಯವರ ಕಾರು ಎಂದು ಹೇಳಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ದುರ್ಘಟನೆ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಮೃತರ ಬಂಧುಗಳು ದುಃಖದಲ್ಲಿ ಮುಳುಗಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP