ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಶ್ಮೀರದಲ್ಲಿ ಮೂರನೇ ದಿನವೂ ಕಠಿಣ ನಿರ್ಬಂಧ
ಶ್ರೀನಗರ, 04 ಮಾರ್ಚ್ (ಹಿ.ಸ.): ಆ್ಯಂಕರ್:ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೆನಿ ಹತ್ಯೆಯನ್ನು ಖಂಡಿಸಿ ಕಣಿವೆಯಲ್ಲಿ ಭುಗಿಲೆದ್ದ ಬೃಹತ್ ಪ್ರತಿಭಟನೆಗಳ ಹಿನ್ನೆಲೆ, ಬುಧವಾರವೂ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರಿದವು. ಸತತ ಮೂರನೇ ದಿನವೂ ಜನರ ಚಲನವಲನ ಹಾಗೂ ಸಭೆ-ಸಮಾ
Protest ban


ಶ್ರೀನಗರ, 04 ಮಾರ್ಚ್ (ಹಿ.ಸ.):

ಆ್ಯಂಕರ್:ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೆನಿ ಹತ್ಯೆಯನ್ನು ಖಂಡಿಸಿ ಕಣಿವೆಯಲ್ಲಿ ಭುಗಿಲೆದ್ದ ಬೃಹತ್ ಪ್ರತಿಭಟನೆಗಳ ಹಿನ್ನೆಲೆ, ಬುಧವಾರವೂ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರಿದವು. ಸತತ ಮೂರನೇ ದಿನವೂ ಜನರ ಚಲನವಲನ ಹಾಗೂ ಸಭೆ-ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರವು ಶಿಕ್ಷಣ ಸಂಸ್ಥೆಗಳ ಮುಚ್ಚುವಿಕೆಯನ್ನು ಶನಿವಾರದವರೆಗೆ ವಿಸ್ತರಿಸಿದೆ. ಮೊಬೈಲ್ ಇಂಟರ್ನೆಟ್ ವೇಗವನ್ನು ಕಡಿಮೆ ಮಾಡಲಾಗಿದ್ದು, ಕೆಲವು ಪ್ರಿಪೇಯ್ಡ್ ಸಂಪರ್ಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಯಾ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮತ್ತು ಕಳೆದ ಮೂರು ದಿನಗಳಿಂದ ಭಾರಿ ಪ್ರತಿಭಟನೆಗಳು ನಡೆದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಗರದ ಪ್ರಮುಖ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.

ನಗರ ಪ್ರವೇಶದ ಪ್ರಮುಖ ಛೇದಕಗಳಲ್ಲಿ ಕನ್ಸರ್ಟಿನಾ ತಂತಿ ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆ ಬಿಗಿಗೊಳಿಸಲಾಗಿದೆ. ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಲಾಲ್ ಚೌಕ್ ಪ್ರದೇಶವನ್ನು ಕೂಡ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಅಮೆರಿಕ-ಇಸ್ರೇಲ್ ಜಂಟಿ ವಾಯುದಾಳಿಯಲ್ಲಿ ಖಮೇನಿ ಹತ್ಯೆಯಾದ ಬಳಿಕ ಭಾನುವಾರ ಕಣಿವೆಯಲ್ಲಿ ಭಾರೀ ಪ್ರತಿಭಟನೆಗಳು ಕಂಡುಬಂದವು. ಆಗಸ್ಟ್ 2019 ನಂತರ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನೆಗಳು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು ಗಮನಾರ್ಹ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande