ಮೈಸೂರು ಸಿಲ್ಕ್’ ಜಾಗ ವಿವಾದ: ಸರ್ಕಾರದ ವಿರುದ್ಧ ಅಶೋಕ ವಾಗ್ದಾಳಿ
ಬೆಂಗಳೂರು, 04 ಮಾರ್ಚ್ (ಹಿ.ಸ.): ಆ್ಯಂಕರ್:ಕರ್ನಾಟಕದ ಹೆಮ್ಮೆಯ ಪಾರಂಪರಿಕ ಪ್ರತೀಕವಾದ ಕೆಎಸ್‌ಐಸಿ ಅಧೀನದ ‘ಮೈಸೂರು ಸಿಲ್ಕ್’ ಘಟಕದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಬಳಸಲು ಸರ್ಕಾರ ಮುಂದಾಗಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯ
Ashok


ಬೆಂಗಳೂರು, 04 ಮಾರ್ಚ್ (ಹಿ.ಸ.):

ಆ್ಯಂಕರ್:ಕರ್ನಾಟಕದ ಹೆಮ್ಮೆಯ ಪಾರಂಪರಿಕ ಪ್ರತೀಕವಾದ ಕೆಎಸ್‌ಐಸಿ ಅಧೀನದ ‘ಮೈಸೂರು ಸಿಲ್ಕ್’ ಘಟಕದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಬಳಸಲು ಸರ್ಕಾರ ಮುಂದಾಗಿರುವುದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣ ಎಕ್ಸ ಮೂಲಕ ಪ್ರಶ್ನೆಗಳ ಸುರಿಮಳೆಗೈದಿರುವ ಅಶೋಕ, ಟಿ.ನರಸೀಪುರದ ಕೆಎಸ್‌ಐಸಿ ಘಟಕದ ಅಭಿವೃದ್ಧಿಗೆ ಅಗತ್ಯವಾದ 5 ಎಕರೆ ಭೂಮಿಯನ್ನು ಸರ್ಕಾರ ಕಬಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕರು ಘಟಕದ ಮುಂದಿನ ವಿಸ್ತರಣೆ, ಹೆಚ್ಚುವರಿ ಉತ್ಪಾದನೆ ಹಾಗೂ ಮಾಲಿನ್ಯ ನಿಯಂತ್ರಣ ಘಟಕ ಸ್ಥಾಪನೆಗಾಗಿ ಆ ಜಾಗ ಅತ್ಯಗತ್ಯವೆಂದು ಅಂಕಿ-ಅಂಶಗಳ ಸಮೇತ ವರದಿ ನೀಡಿದ್ದರೂ, ಸರ್ಕಾರ ಅದನ್ನು ಲೆಕ್ಕಿಸದೆ ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಅಶೋಕ ಆರೋಪಿಸಿದ್ದಾರೆ.

ರೇಷ್ಮೆ ನೂಲು ತೆಗೆಯುವ ಘಟಕಕ್ಕೆ ದಿನಕ್ಕೆ ಸುಮಾರು 5 ಲಕ್ಷ ಲೀಟರ್ ನೀರು ಅಗತ್ಯವಿದ್ದು, ಕ್ರೀಡಾಂಗಣ ನಿರ್ಮಾಣದಿಂದ ನೀರಿನ ಪೈಪ್‌ಲೈನ್‌ಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದರಿಂದ ಇಡೀ ಘಟಕವೇ ಸ್ಥಗಿತಗೊಳ್ಳುವ ಅಪಾಯವಿದೆ ಎಂಬ ಅಧಿಕಾರಿಗಳ ಎಚ್ಚರಿಕೆಯನ್ನು ಕೂಡ ಸರ್ಕಾರ ಕಡೆಗಣಿಸಿದೆ ಎಂದು ಅವರು ಹೇಳಿದ್ದಾರೆ.

ಘಟಕದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಮತ್ತು ಅವರನ್ನು ಅವಲಂಬಿಸಿರುವ ಸಾವಿರಾರು ರೇಷ್ಮೆ ಬೆಳೆಗಾರರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಲಿದೆ. ಲಾಭದಾಯಕ ಸಾರ್ವಜನಿಕ ಉದ್ದಿಮೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಖಾಸಗಿ ಹಿತಾಸಕ್ತಿಗಳಿಗೆ ಲಾಭ ಮಾಡಿಕೊಡುವ ಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಅಶೋಕ ಎತ್ತಿದ್ದಾರೆ.

ಕಾರ್ಖಾನೆ ಕಾಯ್ದೆಯಡಿ ಕನಿಷ್ಠ ಶೇ.30ರಷ್ಟು ಜಾಗವನ್ನು ಹಸಿರು ವಲಯಕ್ಕೆ ಮೀಸಲಿಡಬೇಕು. ಆ ಜಾಗವನ್ನು ಕಿತ್ತುಕೊಂಡರೆ ಘಟಕ ಕಾನೂನುಬಾಹಿರ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎಂದು ಅಶೋಕ ಎಚ್ಚರಿಸಿದ್ದಾರೆ.

ಮೈಸೂರು ಮಹಾರಾಜರ ದೂರದೃಷ್ಟಿಯಿಂದ ಜಾಗತಿಕ ಖ್ಯಾತಿ ಪಡೆದ ‘ಮೈಸೂರು ಸಿಲ್ಕ್’ ಬ್ರಾಂಡ್‌ಗೆ ಹೊಡೆತ ನೀಡುವ ಯಾವುದೇ ಕ್ರಮವನ್ನು ಕನ್ನಡಿಗರು ಒಪ್ಪುವುದಿಲ್ಲ. ತಕ್ಷಣವೇ ಸರ್ಕಾರ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande