
ಮಾಗಡಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:
ನೀರಾವರಿ ಯೋಜನೆಗಳು ರೈತರ ಬದುಕಿಗೆ ಹೊಸ ಬೆಳಕು ನೀಡುತ್ತವೆ. ಅಂತರ್ಜಲ ಮಟ್ಟ ಹೆಚ್ಚಿಸಿ ಕೃಷಿಗೆ ಶಾಶ್ವತ ಪರಿಹಾರ ನೀಡುವುದು ಸರ್ಕಾರದ ಗುರಿ” ಎಂದು ಉಪ ಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಕ್ರಭಾವಿಯಲ್ಲಿ ಆಯೋಜಿಸಿದ್ದ ಮಾಗಡಿ ವೈ.ಜಿ ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಹಾಗೂ ಮಾಗಡಿ ತಾಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಸಾರಿಗೆ ಸಚಿವ ರಾಮಲಿಗಾ ರೆಡ್ಡಿ, ಕುಣಿಗಲ್ ಶಾಸಕ ರಂಗನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ಉಪಸ್ಥಿತರಿದ್ದರು.
“ಇದು ಇತಿಹಾಸದ ಪುಟಗಳಿಗೆ ಸೇರುವಂತಹ ಕಾರ್ಯಕ್ರಮ. ಅಧಿಕಾರದಲ್ಲಿದ್ದಾಗ ಜನರಿಗೆ ಯಾವ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಹೋಗಿದ್ದೇವೆ ಎನ್ನುವುದು ಮುಖ್ಯ. ಮಾಗಡಿ ತಾಲೂಕಿನ ಅಂತರ್ಜಲ ಮಟ್ಟ ಹೆಚ್ಚಿಸಲು ಕಾವೇರಿ ನದಿಯಿಂದ ನೀರು ತರುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದ್ದೇವೆ” ಎಂದು ಶಿವಕುಮಾರ್ ಹೇಳಿದರು.
115 ಕಿ.ಮೀ ದೂರದ ಸತ್ತೇಗಾಲದಿಂದ 160 ಹೆಚ್.ಪಿ ಸಾಮರ್ಥ್ಯದ ಪಂಪ್ ಮೂಲಕ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ನೀರಾವರಿ ಇಲಾಖೆಯ ಮೂಲಕ ಕುಣಿಗಲ್ ತಾಲೂಕಿನಿಗೂ ನೀರು ಒದಗಿಸಲಾಗಿದೆ ಎಂದು ತಿಳಿಸಿದರು.
ಮಾಗಡಿ ಹಾಗೂ ಕುಣಿಗಲ್ ಕ್ಷೇತ್ರಗಳ ನೀರಾವರಿ ಅಭಿವೃದ್ಧಿಗೆ 1000 ಕೋಟಿ ರೂಪಾಯಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. ಮಾಗಡಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಗಳಿಂದಲೂ ನೀರು ಒದಗಿಸುವ ಕಾರ್ಯ ನಡೆಯುತ್ತಿದೆ. ಇಂತಹ ಯೋಜನೆಗಳು ಮುಂದಿನ ಪೀಳಿಗೆಗಳಿಗೆ ಸಾಕ್ಷಿಗುಡ್ಡೆಗಳಾಗಿ ಉಳಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa