
ಗದಗ, 04 ಮಾರ್ಚ್ (ಹಿ.ಸ.)
ಆ್ಯಂಕರ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಅತಿಯಾಗಿ ಹೆಚ್ಚುತ್ತಿದ್ದು, ಅದರ ದುಷ್ಪರಿಣಾಮಗಳು ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ. ವಿವಿಧ ಅಧ್ಯಯನಗಳು ಮತ್ತು ವೈದ್ಯಕೀಯ ಪರೀಕ್ಷೆಗಳು ಇದನ್ನು ದೃಢಪಡಿಸಿರುವ ಹಿನ್ನೆಲೆಯಲ್ಲಿ, ಪಾಲಕರು ಮಕ್ಕಳ ಕೈಗೆ ಅನಾವಶ್ಯಕವಾಗಿ ಮೊಬೈಲ್ ನೀಡುವ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಚನ್ನಮ್ಮ ಡಿಇಡಿ ಕಾಲೇಜಿನ ಪ್ರಾಚಾರ್ಯ ಆರ್.ಎಂ. ಅಂಗಡಿ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗಾಗಿ ಆಯೋಜಿಸಿದ್ದ ‘ಮೊಬೈಲ್ ಅತಿಬಳಕೆ ಮತ್ತು ಜಂಕ್ ಫುಡ್ಗಳ ದುಷ್ಪರಿಣಾಮಗಳು’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರೋನಾ ಮಹಾಮಾರಿ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಆರಂಭವಾದ ಬಳಿಕ ಮಕ್ಕಳಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿ ಹೆಚ್ಚಾಯಿತು. ಆದರೆ ಆ ಅವಶ್ಯಕತೆ ಈಗ ಅವಲಂಬನೆಯಾಗಿ, ನಂತರ ಗೀಳಿನ ರೂಪಕ್ಕೆ ತಿರುಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ತಿಳಿಸಿದರು. ದೀರ್ಘ ಕಾಲ ಮೊಬೈಲ್ ಪರದೆ ಎದುರು ಕಳೆಯುವದು ಮಕ್ಕಳ ದೃಷ್ಟಿ, ಮನೋವೈಕಲ್ಯ, ಏಕಾಗ್ರತೆ ಕೊರತೆ, ನಿದ್ರಾಹೀನತೆ ಮತ್ತು ಸಾಮಾಜಿಕ ಅಂತರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
“ಮಕ್ಕಳಲ್ಲಿ ಮೊಬೈಲ್ ಗೀಳು ಕಡಿಮೆ ಮಾಡಲು ಕೇವಲ ಶಾಲೆಯ ಪ್ರಯತ್ನ ಸಾಲದು. ಪಾಲಕರ ಸಹಕಾರ ಅತ್ಯಗತ್ಯ. ಮನೆಗಳಲ್ಲಿ ಸಹ ನಿಯಂತ್ರಿತ ಬಳಕೆಗೆ ಆದ್ಯತೆ ನೀಡಬೇಕು. ಪಾಲಕರು ತಮ್ಮದೇ ಮೊಬೈಲ್ ಬಳಕೆಯಲ್ಲೂ ನಿಯಮ ಪಾಲಿಸಿದರೆ, ಮಕ್ಕಳಿಗೆ ಉತ್ತಮ ಮಾದರಿಯಾಗಬಹುದು” ಎಂದು ಅವರು ಸಲಹೆ ನೀಡಿದರು. ಮಕ್ಕಳೊಂದಿಗೆ ಸಮಯ ಕಳೆಯುವುದು, ಆಟ-ಪಾಠಗಳಿಗೆ ಉತ್ತೇಜನ ನೀಡುವುದು ಮತ್ತು ಪುಸ್ತಕ ಓದುವ ಅಭ್ಯಾಸ ಬೆಳೆಸುವುದು ಅತ್ಯಂತ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಸಂಜೀವಕುಮಾರ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ದೊರೆಯುವ ತ್ವರಿತ ಆಹಾರ ಪದಾರ್ಥಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅತಿಯಾದ ಎಣ್ಣೆ, ಉಪ್ಪು, ಸಕ್ಕರೆ ಅಂಶ ಹೊಂದಿರುವ ಆಹಾರಗಳು ದೇಹದ ತೂಕ ಹೆಚ್ಚಳ, ಜೀರ್ಣಕ್ರಿಯೆ ತೊಂದರೆ, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
“ಆರೋಗ್ಯ ಸುಸ್ಥಿರವಾಗಿರಲು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಹಸಿರು ತರಕಾರಿ, ಹಣ್ಣು, ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬೇಕು. ಪಾಲಕರು ಮಕ್ಕಳ ಆಹಾರ ಪದ್ಧತಿಯನ್ನು ಗಮನಿಸಿ ಜಂಕ್ ಫುಡ್ ಸೇವನೆ ಕಡಿಮೆ ಮಾಡಿಸುವುದು ಅವಶ್ಯಕ” ಎಂದು ಅವರು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಜೊತೆಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡುತ್ತದೆ ಎಂದರು. ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಅರಿವು ಮೂಡಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿ, ತಜ್ಞರ ಸಲಹೆಗಳನ್ನು ಆಲಿಸಿದರು. ಸಂಸ್ಥೆಯ ನಿರ್ದೇಶಕರಾದ ವಿ.ಡಿ. ಘೋರ್ಪಡೆ, ಎಸ್.ಎಸ್. ಗುಡಗೇರಿ, ಎಸ್.ಜಿ. ಕುಂಬಾರ, ಕಸಾಪ ಅಧ್ಯಕ್ಷ ಈಶ್ವರ ಮೆಲ್ಲೇರಿ, ನಾಗರಾಜ ಮಜ್ಜಿಗುಡ್ಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಈರಣ್ಣ ಗಾಣಿಗೇರ ನಿರ್ವಹಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆರೋಗ್ಯಕರ ಜೀವನ ಶೈಲಿಯ ಮಹತ್ವವನ್ನು ಬಿಂಬಿಸಿ, ಮೊಬೈಲ್ ಮತ್ತು ಜಂಕ್ ಫುಡ್ ಅತಿಬಳಕೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP