ಕನಿಷ್ಠ ವೇತನ ಜಾರಿ ವಿಳಂಬ ಖಂಡನೆ: ರಾಜ್ಯ ಮಟ್ಟದ ಹೋರಾಟಕ್ಕೆ ಸಿದ್ದತೆ
ಗದಗ, 04 ಮಾರ್ಚ್ (ಹಿ.ಸ.) ಆ್ಯಂಕರ್:- ಹಲವು ದಶಕಗಳಿಂದ ಹೋರಾಟ ನಡೆಸಿ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ 2023ರಲ್ಲಿ ಸರ್ಕಾರ ಕನಿಷ್ಠ ವೇತನ ನೀಡುವ ಕುರಿತು ಆದೇಶ ಹೊರಡಿಸಿದ್ದರೂ, ಅದು ಇಂದಿಗೂ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆ
ಫೋಟೋ


ಗದಗ, 04 ಮಾರ್ಚ್ (ಹಿ.ಸ.)

ಆ್ಯಂಕರ್:- ಹಲವು ದಶಕಗಳಿಂದ ಹೋರಾಟ ನಡೆಸಿ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ 2023ರಲ್ಲಿ ಸರ್ಕಾರ ಕನಿಷ್ಠ ವೇತನ ನೀಡುವ ಕುರಿತು ಆದೇಶ ಹೊರಡಿಸಿದ್ದರೂ, ಅದು ಇಂದಿಗೂ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿ, ಶೀಘ್ರದಲ್ಲೇ ರಾಜ್ಯ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಅರಿವು ಕೇಂದ್ರದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಗವಿಸಿದ್ದಪ್ಪ ಎಚ್. ಹಳ್ಳಾಕರ ಎಚ್ಚರಿಕೆ ನೀಡಿದರು.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ವೇತನದ ಆದೇಶವನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದು ದುಃಖದ ಸಂಗತಿ ಎಂದು ಹೇಳಿದರು. “ನಮ್ಮ ಗದಗ ಜಿಲ್ಲೆಯಲ್ಲಿ ಮಾತ್ರವೇ 124 ಗ್ರಂಥಾಲಯ ಮೇಲ್ವಿಚಾರಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ತಿಂಗಳಿನಂತೆ ಸಂಬಳ ಸಿಗದೇ, 3-4 ತಿಂಗಳಿಗೊಮ್ಮೆ ಮಾತ್ರ ಪಾವತಿಯಾಗುತ್ತಿರುವುದರಿಂದ ಸಿಬ್ಬಂದಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ, ಮಕ್ಕಳ ಶಾಲೆ-ಕಾಲೇಜು ಶುಲ್ಕ, ದಿನನಿತ್ಯದ ಅಗತ್ಯ ವೆಚ್ಚಗಳನ್ನು ಪೂರೈಸಿಕೊಳ್ಳಲು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರವು ಕನಿಷ್ಠ ವೇತನವಾಗಿ ₹12,000 ಹಾಗೂ ಗ್ರಾಮ ಪಂಚಾಯಿತಿ ಸೆಸ್ ಮೂಲಕ ₹7,200 ಭರಿಸುವಂತೆ ಸೂಚಿಸಿದ್ದರೂ, ಅದು ಕಾಗದದಲ್ಲೇ ಉಳಿದಿದೆ. ಹೆಸರಿಗೆ ಮಾತ್ರ ಕನಿಷ್ಠ ವೇತನ ಜಾರಿಯಾಗಿದೆ; ವಾಸ್ತವದಲ್ಲಿ ಸಿಬ್ಬಂದಿಗೆ ಸಂಪೂರ್ಣ ಸಂಬಳ ಲಭಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವೀರೇಶ ತಮ್ಮನಗೌಡ್ರ ಮಾತನಾಡಿ, “ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಜಾಗೃತಿ ಮೂಡಿಸುವುದು, ಸಾರ್ವಜನಿಕರಲ್ಲಿ ಓದು ಸಂಸ್ಕೃತಿ ಬೆಳೆಸುವುದು, ಗ್ರಂಥಾಲಯ ನಿರ್ವಹಣೆ ಸೇರಿದಂತೆ ಹಲವು ಕಾರ್ಯಗಳನ್ನು ನಾವು ನಿಷ್ಠೆಯಿಂದ ನಿರ್ವಹಿಸುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಸೇವೆಗೆ ತಕ್ಕ ಗೌರವ ನೀಡುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕನಿಷ್ಠ ವೇತನ ಕಾಯ್ದೆ ಸಕಾಲಕ್ಕೆ ಜಾರಿಗೊಳ್ಳದ ಹಿನ್ನೆಲೆ ಮನನೊಂದು ಇಬ್ಬರು ಗ್ರಂಥಪಾಲಕರು ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಸಂಗತಿ. ಆದರೂ ಸಹ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಅವರು ವಿಷಾದಿಸಿದರು.

“ನಮ್ಮನ್ನು ಸರ್ಕಾರವೇ ಶೋಷಣೆಗೆ ಒಳಪಡಿಸಿದೆ. ಈಗಾಗಲೇ ನಿವೃತ್ತಿ ಹೊಂದಿದ ಹಾಗೂ ನಿವೃತ್ತಿಯಾಗುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ₹10 ಲಕ್ಷ ಪರಿಹಾರ ನೀಡಬೇಕು. 10ರಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೇಲ್ವಿಚಾರಕರನ್ನು ಖಾಯಂಗೊಳಿಸಬೇಕು,” ಎಂದು ವೀರೇಶ ತಮ್ಮನಗೌಡ್ರ ಒತ್ತಾಯಿಸಿದರು.

ಇದುವರೆಗೆ ಸಂಪೂರ್ಣ ಸಂಬಳ ಪಡೆಯದೆ ಸೇವೆ ಸಲ್ಲಿಸುತ್ತಿದ್ದೇವೆ. ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆದಿದ್ದೇವೆ, ಮನವಿ ಸಲ್ಲಿಸಿದ್ದೇವೆ, ವಿವಿಧ ರೀತಿಯ ಹೋರಾಟ ನಡೆಸಿದ್ದೇವೆ. ಆದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದರು.

ಪಿಎಫ್, ಇಎಸ್ಐ, ಗಳಿಕೆ ರಜೆ ಸೇರಿದಂತೆ ಇತರೆ ಹಕ್ಕುಗಳನ್ನು ಕೂಡಲೇ ಜಾರಿಗೊಳಿಸಬೇಕು.

ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ನಮ್ಮ ಇಲಾಖೆಯನ್ನು ಮಾತೃ ಇಲಾಖೆಯಾದ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸರ್ಕಾರ ಶೀಘ್ರದಲ್ಲೇ ಕನಿಷ್ಠ ವೇತನ ಆದೇಶವನ್ನು ಜಾರಿಗೆ ತರದಿದ್ದರೆ, ರಾಜ್ಯದಾದ್ಯಂತ ಸಂಘಟಿತ ಹೋರಾಟ ನಡೆಸಿ ನ್ಯಾಯ ಪಡೆಯುವುದಾಗಿ ಗ್ರಂಥಾಲಯ ಮೇಲ್ವಿಚಾರಕರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗದಗ ತಾಲೂಕು ಘಟಕದ ಅಧ್ಯಕ್ಷ ಚನ್ನಯ್ಯ ಪ್ರಭಯ್ಯನಮಠ, ಜಿಲ್ಲಾ ಖಜಾಂಚಿ ಭಗವಂತ ತಾರಿಕೊಪ್ಪ, ಮುಂಡರಗಿ ಘಟಕದ ಅಧ್ಯಕ್ಷ ಪ್ರೇಮಸಿಂಗ್ ಪವಾರ, ಕಾರ್ಯದರ್ಶಿ ಅಂದಪ್ಪ ತುರಕಾಣಿ, ಜಿಲ್ಲಾ ಸಂಚಾಲಕ ಹಾಲಪ್ಪ ಕೊರ್ಲಹಳ್ಳಿ, ರಾಘವೇಂದ್ರ ತಳವಾರ, ಬಸವರಾಜ ಬೋಮ್ಮನಪಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande