
ಗದಗ, 04 ಮಾರ್ಚ್ (ಹಿ.ಸ.)
ಆ್ಯಂಕರ್:- ಧಾರವಾಡ, ಹಾವೇರಿ, ಗದಗ ಹಾಗೂ ಕಾರವಾರ ಜಿಲ್ಲೆಗಳನ್ನೊಳಗೊಂಡ ವಿಶಾಲವಾದ ಪಶ್ಚಿಮ ಪದವೀಧರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ಪದವೀಧರರ ಧ್ವನಿಯಾಗಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿ ಜನರ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಲಕ್ಷೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂಬರುವ ಪಶ್ಚಿಮ ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಆಯೋಜಿಸಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಈಗಾಗಲೇ 88 ಸಾವಿರಕ್ಕೂ ಅಧಿಕ ಪದವೀಧರರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. 1984ರಿಂದ 2008ರವರೆಗೆ ಈಗಿನ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ನಾನು ಸಹ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಹೇಳಿದರು.
ಪದವೀಧರರ ಕುಂದು-ಕೊರತೆಗಳನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುವುದು, ಉದ್ಯೋಗಾವಕಾಶ, ಸೇವಾ ಭದ್ರತೆ, ಆಡಳಿತಾತ್ಮಕ ಪಾರದರ್ಶಕತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸದನದಲ್ಲಿ ಪರಿಣಾಮಕಾರಿ ಧ್ವನಿಯಾಗಿ ಕಾರ್ಯನಿರ್ವಹಿಸುವುದು ನನ್ನ ಮೊದಲ ಆದ್ಯತೆ. “ಎಲ್ಲರೂ ಆಶೀರ್ವಾದ ನೀಡಿ ಮತ ನೀಡಿದರೆ, ನಿಮ್ಮ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಜನಮುಖಿ ಕೆಲಸ ಮಾಡುತ್ತೇನೆ” ಎಂದು ಅವರು ಭರವಸೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಅವರು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕ್ರಿಯಾಶೀಲ ವ್ಯಕ್ತಿತ್ವದ ಮೋಹನ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡುವ ಮೂಲಕ ಪದವೀಧರರು ತಮ್ಮ ಹಕ್ಕುಗಳಿಗೆ ಬಲವಾದ ಧ್ವನಿಯನ್ನು ಸದನದಲ್ಲಿ ಪಡೆಯಲಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, “ಪದವೀಧರರ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಹೊಂದಿರುವ ಅಭ್ಯರ್ಥಿ ಮೋಹನ ಲಿಂಬಿಕಾಯಿ. ಸಂಘಟನಾ ಶಕ್ತಿ ಮತ್ತು ಸಾಮಾಜಿಕ ಬದ್ಧತೆ ಇವರ ಬಲವಾಗಿದೆ” ಎಂದು ಹೇಳಿದರು.
ಹಿರಿಯ ಮುಖಂಡ ಹಾಗೂ ನಿಗಮ ಮಂಡಳಿ ಅಧ್ಯಕ್ಷ ನಂಜಯ್ಯನಮಠ ಅವರು, “ಮೋಹನ ಲಿಂಬಿಕಾಯಿ ಸಮಾಜಮುಖಿ ಚಿಂತನೆ ಹೊಂದಿರುವ ಕ್ರಿಯಾಶೀಲ ವ್ಯಕ್ತಿ. ಇವರ ಆಯ್ಕೆ ಪದವೀಧರರಿಗೆ ದೊಡ್ಡ ಶಕ್ತಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, “ಪಶ್ಚಿಮ ಪದವೀಧರ ಚುನಾವಣೆ ಒಂದು ರೀತಿಯ ಮಾರ್ಗಸೂಚಿ ಚುನಾವಣೆಯಾಗಿದೆ. ಇಲ್ಲಿ ವ್ಯಕ್ತಿತ್ವ ಮತ್ತು ನಿಷ್ಠೆ ಮುಖ್ಯ. ಪೊಳ್ಳು ಭರವಸೆಗಳಿಗೆ ಬಲಿಯಾಗದೆ ಅರ್ಹ ಮತ್ತು ಜನಮುಖಿ ಅಭ್ಯರ್ಥಿಗೆ ಮತ ನೀಡಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ ಲಕ್ಷೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಘಟಕ ಅಧ್ಯಕ್ಷ ಅಮರೇಶ ತೆಂಬದಮನಿ, ಸೋಮಣ್ಣ ಬೆಟಗೇರಿ, ಎಂ.ಎಂ. ಗದಗ, ಸುರೇಶ ನಾವಿ, ಗುರುನಾಥ ದಾನಪ್ಪನವರ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ರಂಜನ್ ಪಾಟೀಲ, ಯಲ್ಲಪ್ಪ ತಳವಾರ, ವಿ.ಜಿ. ಪಡಗೇರಿ, ದೀಪಕ ಲಮಾಣಿ, ರಾಜು ಪಾಟೀಲ, ಆದಪ್ಪಗೌಡ ಪಾಟೀಲ, ಎಂ.ಆರ್. ಸೋಂಪೂರ, ಅಂದಾನಯ್ಯ ಕುರ್ತಕೋಟಿಮಠ, ಮಹೇಶ ಹಾರೋಗೇರಿ, ಎಸ್.ಕೆ. ಹವಾಲ್ದಾರ, ಡಿ.ಜೆ. ಮುಚ್ಚಾಲೆ, ಸತೀಶ ಪಾಟೀಲ, ಪದ್ಮರಾಜ ಪಾಟೀಲ, ಕಮತದ, ರಮೇಶ ಕಲಬುರ್ಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಿರಣ ನವಲೆ ನಿರೂಪಿಸಿದರು.
ಸಭೆ ಅಂತ್ಯದಲ್ಲಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಪದವೀಧರ ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡುವ ಸಂಕಲ್ಪ ಕೈಗೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / lalita MP