ಪಾರ್ಲರ್ ಹಾವಳಿ ವಿರುದ್ಧ ಸವಿತಾ ಸಮಾಜದ ಸಮರ
ಗದಗ, 30 ಮಾರ್ಚ್ (ಹಿ.ಸ.) ಆ್ಯಂಕರ್:- ಡಿಜಿಟಲ್ ಯುಗದಲ್ಲಿ ಮೊಬೈಲ್ ಡೇಟಾ ಮತ್ತು ರೀಚಾರ್ಜ್ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ಟೆಲಿಕಾಂ ಕಂಪನಿಗಳ ಸುಲಿಗೆ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿರುವ ಸಂಸದ ರಾಘವ್ ಚಡ್ಡಾ ಅವರ ಹೋರಾಟಕ್ಕೆ ಗದಗ ಜಿಲ್ಲಾ ಸವಿತಾ ಸಮಾಜ ಬಲವಾದ ಬೆಂಬಲ ಸೂಚಿಸ
ಫೋಟೋ


ಗದಗ, 30 ಮಾರ್ಚ್ (ಹಿ.ಸ.)

ಆ್ಯಂಕರ್:- ಡಿಜಿಟಲ್ ಯುಗದಲ್ಲಿ ಮೊಬೈಲ್ ಡೇಟಾ ಮತ್ತು ರೀಚಾರ್ಜ್ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ನಡೆಯುತ್ತಿರುವ ಟೆಲಿಕಾಂ ಕಂಪನಿಗಳ ಸುಲಿಗೆ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಿರುವ ಸಂಸದ ರಾಘವ್ ಚಡ್ಡಾ ಅವರ ಹೋರಾಟಕ್ಕೆ ಗದಗ ಜಿಲ್ಲಾ ಸವಿತಾ ಸಮಾಜ ಬಲವಾದ ಬೆಂಬಲ ಸೂಚಿಸಿದೆ.

ಈ ಕುರಿತು ಪ್ರಕಟಣೆ ನೀಡಿದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು, ಜನಪರ ನಿಲುವು ತಾಳಿರುವ ಚಡ್ಡಾ ಅವರ ಕ್ರಮವನ್ನು “ಐತಿಹಾಸಿಕ” ಎಂದು ಬಣ್ಣಿಸಿದರು. ಮೊಬೈಲ್ ಸೇವಾ ಕಂಪನಿಗಳು ಕೇವಲ 28 ದಿನಗಳ ವ್ಯಾಲಿಡಿಟಿ ನೀಡುವ ಮೂಲಕ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಹಗಲು ದರೋಡೆ ಎಂದ ಅವರು, ಬಳಕೆಯಾಗದ ಡೇಟಾವನ್ನು ‘ಡಿಜಿಟಲ್ ಆಸ್ತಿ’ ಎಂದು ಪರಿಗಣಿಸಿ ಮುಂದಿನ ರೀಚಾರ್ಜ್ಗೆ ವರ್ಗಾಯಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಸವಿತಾ ಸಮಾಜದ ಪಾರಂಪರಿಕ ವೃತ್ತಿ ಸಂಕಷ್ಟದತ್ತ ಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಒಂದೆಡೆ ಡಿಜಿಟಲ್ ಸುಲಿಗೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕಾರ್ಪೊರೇಟ್ ಶಕ್ತಿಗಳು ಸವಿತಾ ಸಮಾಜದ ಕುಲಕಸುಬನ್ನು ಹೈಜಾಕ್ ಮಾಡುತ್ತಿವೆ. ಮಲ್ಟಿ-ನ್ಯಾಷನಲ್ ಕಂಪನಿಗಳು ಹಾಗೂ ಶ್ರೀಮಂತರು ತಮ್ಮ ‘ಕಪ್ಪು ಹಣ’ವನ್ನು ಬಿಳಿ ಮಾಡಲು ಬೃಹತ್ ಪಾರ್ಲರ್ಗಳನ್ನು ಆರಂಭಿಸುತ್ತಿದ್ದು, ಶತಮಾನಗಳಿಂದ ಈ ವೃತ್ತಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಕ್ಷೌರಿಕ ಅಂಗಡಿಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಡವಾಳದ ಬಲದಿಂದ ಮಾರುಕಟ್ಟೆ ವಶಪಡಿಸಿಕೊಳ್ಳುತ್ತಿರುವ ಕಾರ್ಪೊರೇಟ್ ಪಾರ್ಲರ್ಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ವೃತ್ತಿ ಬಾಂಧವರಲ್ಲದವರಿಂದ ನಡೆಸಲ್ಪಡುವ ಪಾರ್ಲರ್ಗಳನ್ನು ಗುರುತಿಸಿ ಪರವಾನಗಿ ರದ್ದುಪಡಿಸಬೇಕು ಹಾಗೂ ಸವಿತಾ ಸಮಾಜದವರಿಗೆ ಮಾತ್ರ ಈ ವೃತ್ತಿಯಲ್ಲಿ ಆದ್ಯತೆ ನೀಡುವ ವಿಶೇಷ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಸದ ರಾಘವ್ ಚಡ್ಡಾ ಅವರು ಕೇವಲ ಟೆಲಿಕಾಂ ಸಮಸ್ಯೆಗಳಷ್ಟೇ ಅಲ್ಲದೆ ಸವಿತಾ ಸಮಾಜದ ಸಂಕಷ್ಟಗಳಿಗೂ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಕಾರ್ಪೊರೇಟ್ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

“ಟೆಲಿಕಾಂ ಕಂಪನಿಗಳು ರೀಚಾರ್ಜ್ ಹೆಸರಿನಲ್ಲಿ ಬಡವರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ, ಇತ್ತ ಕಾರ್ಪೊರೇಟ್ ಕಂಪನಿಗಳು ‘ಹವಾನಿಯಂತ್ರಿತ ಪಾರ್ಲರ್’ ಹೆಸರಿನಲ್ಲಿ ಸವಿತಾ ಸಮಾಜದ ಕುಲಕಸುಬಿಗೆ ಚಿತೆ ಇಡುತ್ತಿವೆ. ಶ್ರೀಮಂತರು ತಮ್ಮ ‘ಕಪ್ಪು ಹಣ’ವನ್ನು ತೊಳೆದುಕೊಳ್ಳಲು ಬಡವರ ಅನ್ನದ ತಟ್ಟೆ ಕಸಿದುಕೊಳ್ಳುತ್ತಿರುವುದು ಹಗಲು ದರೋಡೆ. ಈ ‘ಗ್ಲಾಮರ್ ಮಾಫಿಯಾ’ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸಂಸದ ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಸವಿತಾ ಸಮಾಜದ ಪರವೂ ಸಿಡಿಲಿನಂತೆ ಗುಡುಗಬೇಕು ಎಂದು ರಾಜ್ಯ ಸವಿತಾ ಸಮಾಜ ನಾಯಕ ಬೈಲಪ್ಪ ನಾರಾಯಣಸ್ವಾಮಿ, ಆಗ್ರಹಿಸಿದ್ದಾರೆ.

“ಸಾಮಾನ್ಯ ಜನರ ಬೆವರಿನ ಹಣವನ್ನು ಲೂಟಿ ಮಾಡುತ್ತಿರುವ ಟೆಲಿಕಾಂ ಮಾಫಿಯಾ ಮತ್ತು ಸವಿತಾ ಸಮಾಜದ ಬದುಕನ್ನು ಕಸಿದುಕೊಳ್ಳುತ್ತಿರುವ ಕಾರ್ಪೊರೇಟ್ ಮಾಫಿಯಾದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಜನಪರ ರಾಜಕಾರಣಿಗಳಿಗೆ ನಾವು ಶಕ್ತಿಯಾಗಿ ನಿಲ್ಲುತ್ತೇವೆ,” ಎಂದು ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande