
ನವದೆಹಲಿ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ನವದೆಹಲಿ ಈಶಾನ್ಯ ಭಾಗದ ಚಾಂದ್ ಬಾಗ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡ ಆತಂಕಕ್ಕೆ ಕಾರಣವಾಯಿತು. ಬಹುಮಹಡಿ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಭಯಗೊಂಡ ನಾಲ್ವರು ಮೊದಲ ಮಹಡಿಯಿಂದ ಹೊರಗೆ ಹಾರಿದ ಘಟನೆ ನಡೆದಿದೆ.
ದಯಾಳ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಈ ಕಟ್ಟಡದ ನೆಲ ಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಎರಡು ಸ್ಕೂಟರ್‌ಗಳು ಮತ್ತು ಒಂದು ಮೋಟಾರ್‌ಸೈಕಲ್‌ಗೆ ಮೊದಲು ಬೆಂಕಿ ತಗುಲಿದ್ದು, ನಂತರ ಹೊಗೆ ವೇಗವಾಗಿ ಮೇಲಿನ ಮಹಡಿಗಳಿಗೂ ಹರಡಿತು.
ಬೆಳಗಿನ ಜಾವ 2:30ರ ಸುಮಾರಿಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಲಭ್ಯವಾಗಿದ್ದು, ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಯಿತು. ಬೆಂಕಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ 2:56ರ ವೇಳೆಗೆ ‘ಮೇಕ್-4’ ಅಗ್ನಿ ಎಂದು ಘೋಷಿಸಿ, ಒಟ್ಟು 11 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ನಿಯೋಜಿಸಲಾಯಿತು.
ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆಯಿಂದ ಎರಡನೇ, ಮೂರನೇ ಹಾಗೂ ನಾಲ್ಕನೇ ಮಹಡಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ನಾಲ್ಕನೇ ಮಹಡಿಯಿಂದ ಒಂದು ಮಗುವನ್ನೂ ಜೀವಂತವಾಗಿ ಹೊರತೆಗೆದಿದ್ದಾರೆ.
ಈ ವೇಳೆ ಹೊಗೆಯಿಂದ ಗಾಬರಿಗೊಂಡು ಮೊದಲ ಮಹಡಿಯಿಂದ ಹಾರಿದ ನಿಖತ್ (22), ರಶೀದಾ (50), ಸೋನಿ (25) ಮತ್ತು ಎರಡು ವರ್ಷದ ಆಸಿಫ್ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನಂತರ ಎಲ್ಲರನ್ನು ಬಿಡುಗಡೆ ಮಾಡಲಾಗಿದೆ.
ಸುಮಾರು ಐದು ಮಹಡಿಗಳಿರುವ ಈ ಕಟ್ಟಡದಲ್ಲಿ ಹೊಗೆ ಆವರಿಸಿಕೊಂಡ ಕಾರಣ ಹಲವು ಮಂದಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಅಗ್ನಿಶಾಮಕ ಸಿಬ್ಬಂದಿ ಶ್ರಮಪಟ್ಟು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬೆಳಿಗ್ಗೆ 6:20ರ ವೇಳೆಗೆ ಬೆಂಕಿ ಸಂಪೂರ್ಣ ನಂದಿಸಿ, ಎಲ್ಲಾ ವಾಹನಗಳು ಹಿಂತಿರುಗಿದವು.
ಎಡಿಒ ದೀಪಕ್ ಹೂಡಾ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಂದಲೇ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa