ಮಹಿಳಾ ಸಬಲೀಕರಣದಿಂದಲೇ ಸಮಾಜದ ಸಮಗ್ರ ಅಭಿವೃದ್ಧಿ: ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ
ವಿಜಯಪುರ, 27 ಮಾರ್ಚ್ (ಹಿ.ಸ.) ಆ್ಯಂಕರ್ : ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯಾವಶ್ಯಕವಾಗಿದ್ದು, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಮುಂದೆ ಬರಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ
ಸಬಲಿಕತಣ


ವಿಜಯಪುರ, 27 ಮಾರ್ಚ್ (ಹಿ.ಸ.)

ಆ್ಯಂಕರ್ : ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣ ಅತ್ಯಾವಶ್ಯಕವಾಗಿದ್ದು, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಮುಂದೆ ಬರಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.

ವಿಜಯಪುರ ನಗರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಿಯ ಸೇವಾ ಯೋಜನೆ (ಎನ್.ಎಸ್.ಎಸ್) ಕೋಶ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ರಾಜ್ಯಮಟ್ಟದ ಮಹಿಳಾ ಯುವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದೆ ಇಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ತ್ರೀ ಸಂಬಂಧಿತ ವಿಷಯಗಳ ಬಗ್ಗೆ ಸಮಾಜದಲ್ಲಿ ಸಮಗ್ರ ಜಾಗೃತಿ ಮೂಡಿಸುವ ಅಗತ್ಯವಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಪಡೆದು ಮುನ್ನಡೆಯಲು ಪ್ರೋತ್ಸಾಹ ನೀಡಬೇಕು. ಮಹಿಳಾ ಸಬಲೀಕರಣವು ಕೇವಲ ಕುಟುಂಬದಷ್ಟೇ ಅಲ್ಲ, ಸಮಗ್ರ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಎನ್.ಎಸ್.ಎಸ್ ಸಲಹಾ ಸಮಿತಿ ಸದಸ್ಯ ಡಾ. ಜಾವೀದ್ ಜಮಾದಾರ ಮಾತನಾಡಿ, ಯುವಜನತೆ ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೇ ಬದಲಿಸಬಹುದು. ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡಗಳಿಂದ ಜೀವನ ಮೌಲ್ಯಗಳು ಅಪಾಯದ ಅಂಚಿಗೆ ಸರಿಯುತ್ತಿವೆ. ಯುವಕರು ದೇಶದ ಭವ್ಯ ಸಂಸ್ಕೃತಿಯಿಂದ ದೂರವಾಗಬಾರದು ಎಂದು ಸಲಹೆ ನೀಡಿದರು.

ಎನ್.ಎಸ್.ಎಸ್ ಮುಖಾಂತರ ಯುವಕರು ಶ್ರಮದಾನ ಮತ್ತು ಸ್ವಯಂಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಬೇಕು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯುವ ನಾಯಕಿ ಭವಾನಿ ರಾಜು ಆಲಗೂರ ಮಾತನಾಡಿ, ಯುವಕರು ತಮ್ಮ ಹೆಚ್ಚಿನ ಸಮಯವನ್ನು ಅಭಿವೃದ್ಧಿ ಕಾರ್ಯಗಳ ಕಡೆಗೆ ಕೇಂದ್ರೀಕರಿಸಬೇಕು. ಯುವ ಶಕ್ತಿಯ ಸದುಪಯೋಗವಾಗಬೇಕಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಕಲ್ಯಾಣ ಕಾರ್ಯಗಳಲ್ಲಿ ಯುವಜನತೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಎಲ್. ಲಕ್ಕಣ್ಣವರ, ವಿಜಯಪುರ ಜಿಲ್ಲಾ ಮೀನುಗಾರರ ವಿಭಾಗದ ಕಾರ್ಯದರ್ಶಿ ಕೃಷ್ಣಾ ಕೆ.ಎಚ್., ಮಹಿಳಾ ವಿವಿ ಸಿಂಡಿಕೇಟ್ನ ಮಾಜಿ ಸದಸ್ಯ ಆರ್.ಸಿ. ಪಾಟೀಲ, ಪ್ರೊ. ರಾಜಕುಮಾರ ಪಿ. ಮಾಲಿಪಾಟೀಲ, ಪ್ರೊ. ಅಶೋಕ ಸುರಪುರ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande