
ವಿಜಯಪುರ, 27 ಮಾರ್ಚ್ (ಹಿ.ಸ.)
ಆ್ಯಂಕರ್ : ವಿವಿಧ ಮಾಧ್ಯಮ ಕೌಶಲಗಳನ್ನು ಕಲಿತುಕೊಳ್ಳಬೇಕಾದರೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ವಿಪುಲ ಅವಕಾಶಗಳಿವೆ ಎಂದು ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಹೇಳಿದರು.
ವಿಜಯಪುರ ನಗರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ವಿಜಯಪುರದ ಬಿ.ಡಿ.ಇ. ಸೊಸೈಟಿಯ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾತ್ಯಕ್ಷಿಕ ಭೇಟಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮಾಧ್ಯಮ ಕ್ಷೇತ್ರದ ಪ್ರಾಯೋಗಿಕ ಜ್ಞಾನವನ್ನು ಅರಿಯುವ ಉದ್ದೇಶದಿಂದ ಈ ಭೇಟಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿನಿಯರು ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ ಮಾಧ್ಯಮ ಕ್ಷೇತ್ರದ ನೈಜ ಅನುಭವವನ್ನು ಪಡೆಯುವುದು ಅತ್ಯವಶ್ಯಕ ಎಂದು ಅವರು ಹೇಳಿದರು.
ಯಾವುದೇ ವಿಷಯದಲ್ಲಿ ಸ್ನಾತಕ ಪದವಿ ಪಡೆದಿರುವ ವಿದ್ಯಾರ್ಥಿನಿಯರು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಂಎ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅವಕಾಶಗಳಿದ್ದು, ಎರಡು ವರ್ಷದ ಈ ಕೋರ್ಸ್ ಪೂರ್ಣಗೊಳಿಸಿದ ಬಳಿಕ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ವಿವರಿಸಿದರು.
ಈ ವೇಳೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ನಾಯಕ್ ಮಾತನಾಡಿ, ನ್ಯೂಸ್ ರೀಡಿಂಗ್ಗೆ ಅಗತ್ಯವಾದ ಸೆಟ್, ಕ್ಯಾಮೆರಾ ವ್ಯವಸ್ಥೆ, ಲೈಟಿಂಗ್, ಸೌಂಡ್ ರೆಕಾರ್ಡಿಂಗ್ ಹಾಗೂ ಪ್ರಸಾರ ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಸಮಗ್ರ ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಿಗೆ ನೈಜ ಮಾಧ್ಯಮ ಅನುಭವ ಕಲ್ಪಿಸುವ ಉದ್ದೇಶದಿಂದ ಸ್ಟುಡಿಯೋವನ್ನು ಪ್ರಾಯೋಗಿಕ ತರಬೇತಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅತ್ಯಾಧುನಿಕ ಸ್ಟುಡಿಯೋ ವ್ಯವಸ್ಥೆಯನ್ನು ನೇರವಾಗಿ ವೀಕ್ಷಿಸಿದ ವಿದ್ಯಾರ್ಥಿನಿಯರು ಸಂತೋಷ ವ್ಯಕ್ತಪಡಿಸಿ, ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರ ತಂಡದ ನೇತೃತ್ವವನ್ನು ಬಿ.ಡಿ.ಇ. ಸೊಸೈಟಿಯ ಕಾಲೇಜಿನ ಅಧ್ಯಾಪಕರಾದ ಡಾ. ಸೀಮಾ ಹೊನವಾಡ, ಡಾ. ಸವಿತಾ ಪಾಟೀಲ್ ಹಾಗೂ ಅನಿತಾ ಹುಳ್ಳೂರು ವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande