
ವಿಜಯಪುರ, 27 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ–2027 ಕಾರ್ಯಕ್ಕೆ ನಿಯೋಜಿಸಲ್ಪಡುವ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡುವಂತೆ ಹಾಗೂ ಅವರು ತರಬೇತಿಯ ಸದುಪಯೋಗ ಪಡೆದುಕೊಂಡು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ–2027ರ ಪೂರ್ವಭಾವಿ ಸಿದ್ಧತೆಗಳ ಕುರಿತು ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ತರಬೇತುದಾರರನ್ನುದ್ದೇಶಿಸಿ ಮಾತನಾಡಿದ ಅವರು, ಗಣತಿ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳು ಕಾಲಕಾಲಕ್ಕೆ ನೀಡಲಾಗುವ ತರಬೇತಿಯ ಪ್ರಯೋಜನ ಪಡೆದುಕೊಂಡು, ಯಾವುದೇ ಲೋಪದೋಷಗಳು ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮೊದಲ ಹಂತವಾಗಿ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಎರಡನೇ ಹಂತದಲ್ಲಿ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುತ್ತದೆ. ಫೆಬ್ರವರಿ 2027ರಿಂದ ಮುಖ್ಯ ಜನಗಣತಿ ಕಾರ್ಯ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮನೆಗಳು, ಬಾಡಿಗೆ ಕುಟುಂಬಗಳು, ತೋಟದ ವಸತಿಗಳು, ಸ್ಲಂ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಕುಟುಂಬವೂ ಮನೆ ಪಟ್ಟಿ ಕಾರ್ಯದಲ್ಲಿ ಒಳಗೊಳ್ಳುವಂತೆ ಕ್ರಮವಹಿಸಬೇಕು. ಯಾವುದೇ ಕುಟುಂಬ ಜನಗಣತಿಯಿಂದ ಹೊರತುಪಡಿಸದಂತೆ ಅತಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಅವರು ಸೂಚಿಸಿದರು.
ಗಣತಿದಾರರಾಗಿ ನಿಯೋಜಿಸಲಾದ ಸಿಬ್ಬಂದಿಯನ್ನು 50 ಜನರ ಗುಂಪುಗಳಾಗಿ ಮಾಡಿ ತರಬೇತಿ ನೀಡಬೇಕು. ಅವರಿಗೆ ಎರಡು ಅಥವಾ ಮೂರು ಬಾರಿ ತರಬೇತಿ ನೀಡಿ ಪೂರ್ಣ ತಿಳುವಳಿಕೆ ಒದಗಿಸಬೇಕು ಎಂದು ತಿಳಿಸಿದರು. ವಾರ್ಡ್ಗಳ ಬ್ಲಾಕ್ಗಳನ್ನು ರಚಿಸುವ ವೇಳೆ ಒಂದೇ ವಾರ್ಡ್ ಮತ್ತೊಂದರೊಂದಿಗೆ ವಿಲೀನವಾಗದಂತೆ ಎಚ್ಚರಿಕೆ ವಹಿಸಿ ಅಂತಿಮಗೊಳಿಸಬೇಕು. ಅಂತಿಮಗೊಳಿಸುವ ಮೊದಲು ಸಮಗ್ರವಾಗಿ ಪರಿಶೀಲನೆ ನಡೆಸಬೇಕೆಂದು ಹೇಳಿದರು.
ಜಿಲ್ಲೆಯ ಎಲ್ಲ ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕಚೇರಿಗಳಿಗೆ ವರ್ಕಿಂಗ್ ಮ್ಯಾಪ್ಗಳನ್ನು ಒದಗಿಸುವಂತೆ ಸೂಚಿಸಿದ ಅವರು, ತಹಶೀಲ್ದಾರರು ಹಾಗೂ ಮುಖ್ಯಾಧಿಕಾರಿಗಳು ಶೀಘ್ರವಾಗಿ ತರಬೇತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಮನೆ ಪಟ್ಟಿ ಕ್ಷೇತ್ರ ಕಾರ್ಯ ಒಂದು ತಿಂಗಳ ಕಾಲ ನಡೆಯಲಿದ್ದು, ಯಾರೂ ನಿರ್ಲಕ್ಷ್ಯ ತೋರದೆ ಕಾರ್ಯವನ್ನು ಕಟ್ಟುನಿಟ್ಟಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಇಂಡಿ ತಹಶೀಲ್ದಾರ ಬಿ.ಎಸ್. ಕಡಕಬಾವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ ಸೇರಿದಂತೆ ವಿವಿಧ ತಾಲೂಕಿನ ತಹಶೀಲ್ದಾರರು, ಮುಖ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande