
ನವದೆಹಲಿ, 26 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದು (ಮಾ.26) ಜಂಟಿಯಾಗಿ ಒಟ್ಟು 32 ನಿಗದಿತ ಹಾಗೂ ನಿಗದಿತವಲ್ಲದ ವಿಮಾನಗಳ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿವೆ.
ಜಿದ್ದಾ (ಜೆಡ್ಡಾ) ಮಾರ್ಗದಲ್ಲಿ ನಿಗದಿತ ಸೇವೆಗಳು ಮುಂದುವರಿಯಲಿದ್ದು, ಭಾರತ–ಜೆಡ್ಡಾ ನಡುವೆ ಒಟ್ಟು 10 ವಿಮಾನಗಳು ಸಂಚರಿಸಲಿವೆ. ಇದರಲ್ಲಿ ಏರ್ ಇಂಡಿಯಾ ದೆಹಲಿ ಮತ್ತು ಮುಂಬೈನಿಂದ ರಿಟರ್ನ್ ಸೇವೆಗಳನ್ನು ನಡೆಸಲಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೋಝಿಕ್ಕೋಡ್ ಮತ್ತು ಮಂಗಳೂರಿನಿಂದ ಸೇವೆಗಳನ್ನು ಒದಗಿಸಲಿದೆ.
ಮಸ್ಕತ್ ಸಂಪರ್ಕಕ್ಕಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೆಹಲಿ ಮತ್ತು ಮುಂಬೈ ಸೇರಿ ನಾಲ್ಕು ನಿಗದಿತ ವಿಮಾನಗಳನ್ನು ನಡೆಸಲಿದೆ. ಜೊತೆಗೆ, ಕೋಝಿಕ್ಕೋಡ್–ರಿಯಾದ್ ನಡುವೆ ಎರಡು ಸೇವೆಗಳು ಇರಲಿವೆ.
ಇನ್ನೂ, ರಿಯಾದ್ ಮಾರ್ಗದಲ್ಲಿ ಏರ್ ಇಂಡಿಯಾ ದೆಹಲಿ ಮತ್ತು ಮುಂಬೈನಿಂದ ನಾಲ್ಕು ನಿಗದಿತ ವಿಮಾನಗಳನ್ನು ಕಾರ್ಯಾಚರಣೆಗೊಳಿಸಲಿದೆ.
ಇದರೊಂದಿಗೆ, ಯುನೈಟೆಡ್ ಅರಬ್ ಎಮಿರೇಟ್ಸ್ ಕಡೆಗೆ ಹಾಗೂ ಅಲ್ಲಿಂದ ಒಟ್ಟು 12 ನಿಗದಿತವಲ್ಲದ (ಚಾರ್ಟರ್) ವಿಮಾನಗಳನ್ನು ನಡೆಸಲಾಗುತ್ತಿದೆ. ಈ ಸೇವೆಗಳು ಸ್ಲಾಟ್ ಲಭ್ಯತೆ ಹಾಗೂ ಪ್ರಸ್ತುತ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತವೆ.
ಸಂಬಂಧಿತ ಭಾರತೀಯ ಮತ್ತು ಸ್ಥಳೀಯ ನಿಯಂತ್ರಕ ಸಂಸ್ಥೆಗಳ ಅನುಮತಿ ಪಡೆದ ನಂತರವೇ ಈ ವಿಮಾನಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.
ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ವಿಮಾನಗಳ ನವೀಕೃತ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪರಿಸ್ಥಿತಿಯ ಅನ್ವಯ ವೇಳಾಪಟ್ಟಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa