
ಮೈಸೂರು, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಪ್ರಜ್ಞಾಪ್ರವಾಹದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಏಕಾತ್ಮ ಮಾನವ ದರ್ಶನ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಬುಧವಾರ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಸಮ್ಮೇಳನವನ್ನು ಆಯೋಜಿಸಿದ್ದ ಪ್ರಜ್ಞಾ ಪ್ರವಾಹ ಹಾಗೂ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನಗಳ ಕಾರ್ಯವನ್ನು ಶ್ಲಾಘಿಸಿದ ಅವರು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಪ್ರತಿಪಾದಿಸಿದ ಏಕಾತ್ಮ ಮಾನವ ದರ್ಶನವು ಆಳವಾದ ತಾತ್ವಿಕ ಮತ್ತು ನಾಗರಿಕತೆಯ ಚೌಕಟ್ಟಾಗಿದ್ದು, ಅದರ ಅರವತ್ತು ವರ್ಷದ ಪಯಣ ಇಂದಿನ ಕಾಲಘಟ್ಟದಲ್ಲೂ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.
ಸಮಗ್ರ ಮಾನವತಾವಾದದ ತತ್ವಗಳನ್ನು ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ಸಮತೋಲಿತ ಮತ್ತು ಸಾಮರಸ್ಯಯುತ ವಿಶ್ವ ನಿರ್ಮಾಣಕ್ಕಾಗಿ ನೀತಿ ಮತ್ತು ಕಾರ್ಯಪದ್ಧತಿಗಳಲ್ಲಿ ಈ ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋತ್ ಭಾಗವಹಿಸಿದ್ದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಕುಲಪತಿ ಪ್ರೊ. ಶರಣಪ್ಪ ಹಲಸೆ, ಪ್ರಜ್ಞಾಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ. ಪ್ರದೀಪ ಭಾರದ್ವಾಜ್ ಉಪಸ್ಥಿತರಿದ್ದರು.
ಈ ವೇಳೆ ‘ಭಾರತದರ್ಶನ’ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ದೇಶ-ವಿದೇಶಗಳ ಚಿಂತಕರು, ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa