ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವ ತಿಮ್ಮಾಪುರ ಪ್ರಚಾರ
ಬಾಗಲಕೋಟೆ, 25 ಮಾರ್ಚ್ (ಹಿ.ಸ.) ಆ್ಯಂಕರ್ : ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಜೋರಾಗಿದೆ. ಇಂದು ನಗರದಲ್ಲಿ ಪ್ರಚಾರ ಆರಂಭಿಸಿದ ಉಮೇಶ್ ಮೇಟಿ ಅವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸಾಥ್ ನೀ
ತಿಮ್ಮಾಪುರ


ಬಾಗಲಕೋಟೆ, 25 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಜೋರಾಗಿದೆ. ಇಂದು ನಗರದಲ್ಲಿ ಪ್ರಚಾರ ಆರಂಭಿಸಿದ ಉಮೇಶ್ ಮೇಟಿ ಅವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸಾಥ್ ನೀಡಿದರು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು, ಬಳಿಕ ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಯಿತು.

ಪ್ರಚಾರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಅಜಯಕುಮಾರ್ ಸರನಾಯಕ್, ಮಲ್ಲಿಕಾರ್ಜುನ ಚರಂತಿಮಠ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಚಿವ ತಿಮ್ಮಾಪುರ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಾಗಿ ಕಾಣಿಸುತ್ತಿದೆ. ಮಾಜಿ ಶಾಸಕ ಹೆಚ್.ವೈ. ಮೇಟಿ ಅವರು ಇನ್ನೂ ಐದು ವರ್ಷ ಇರಬೇಕಿತ್ತು ಎಂಬ ಅನುಕಂಪದ ಮಾತುಗಳು ಮತದಾರರಲ್ಲಿ ಕೇಳಿ ಬರುತ್ತಿವೆ. ಆ ಐದು ವರ್ಷವನ್ನು ಅವರ ಪುತ್ರ ಉಮೇಶ್ ಮೇಟಿ ಅವರಿಗೆ ನೀಡೋಣ ಎಂಬ ಅಭಿಪ್ರಾಯವೂ ಜನರಲ್ಲಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ನಮ್ಮ ಪಕ್ಷದ ಪ್ರಚಾರ ಚುರುಕಾಗಿ ಸಾಗುತ್ತಿದೆ. ಎಲ್ಲೆಡೆ ಜನರು ಶಾಲು, ಹಾರ ತೂರಾಯಿ ಹಾಕಿ ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ. “ನಿಮಗೆ ಮತ ಹಾಕುತ್ತೇವೆ” ಎಂದು ಮತದಾರರು ಒಕ್ಕೊರಲಿನಿಂದ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಉಚಿತ ನೀರು, ಉಚಿತ ಬಸ್ ವ್ಯವಸ್ಥೆ, ಉಚಿತ ವಿದ್ಯುತ್ ಸೇರಿದಂತೆ ಕಡುಬಡವರ ಮನೆಗಳಿಂದಲೇ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರ ಆರಂಭಿಸಿದೆ. ಇದನ್ನು ಜನರು ಮೆಚ್ಚುತ್ತಿದ್ದಾರೆ ಎಂದು ತಿಳಿಸಿದರು.

ಉಮೇಶ್ ಮೇಟಿ ಅವರನ್ನು ಗೆಲ್ಲಿಸಿ ತಂದರೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ ತಿಮ್ಮಾಪುರ, ಬಿಜೆಪಿ ಪಕ್ಷದಲ್ಲೇ ಕಿತ್ತಾಟ ಹೆಚ್ಚಾಗಿದೆ. ತಮ್ಮ ಪಕ್ಷದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಬದಲು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande