
ವಿಜಯಪುರ, 24 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲಾಡಳಿತ ವತಿಯಿಂದ ಬರುವ ಏಪ್ರಿಲ್ 5ರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವ ಸಿದ್ಧತಾ ಸಭೆಯನ್ನು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆಸಿ ಈ ನಿರ್ಣಯ ಕೈಗೊಳ್ಳಲಾಯಿತು.
ಏಪ್ರಿಲ್ 5ರಂದು ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತಿ ಅಂಗವಾಗಿ ನಗರದ ಸೆಟ್ಲೈಟ್ ಬಸ್ ನಿಲ್ದಾಣದ ಸಮೀಪ ಇರುವ ಅವರ ಪ್ರತಿಮೆಗೆ ಬೆಳಿಗ್ಗೆ 8 ಗಂಟೆಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ನಗರದ ಪ್ರಮುಖ ವೃತ್ತಗಳ ಮೂಲಕ ಸಾಗುವ ಈ ಮೆರವಣಿಗೆ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಸಮಾಪ್ತಿಯಾಗಲಿದೆ.
ಜಯಂತಿ ಅಂಗವಾಗಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉಪನ್ಯಾಸಕರಿಂದ ಡಾ. ಬಾಬು ಜಗಜೀವನರಾಂ ಅವರ ಜೀವನಚರಿತ್ರೆ ಮತ್ತು ಸಾಧನೆ ಕುರಿತು ಉಪನ್ಯಾಸ ನಡೆಯಲಿದೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಅದೇ ರೀತಿಯಾಗಿ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ನಗರದ ಬುದ್ಧ ವಿಹಾರದಿಂದ ವಿವಿಧ ಕಲಾತಂಡಗಳೊಂದಿಗೆ ಅವರ ಭಾವಚಿತ್ರದ ಮೆರವಣಿಗೆ ಆರಂಭವಾಗಿ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ನುರಿತ ಉಪನ್ಯಾಸಕರಿಂದ ಉಪನ್ಯಾಸ ಏರ್ಪಡಿಸಲಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಲಾಗುವುದು.
ಜಯಂತಿ ಅಂಗವಾಗಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಜೊತೆಗೆ ನಗರದ ವಿವಿಧ ವೃತ್ತಗಳಿಗೆ ದೀಪಾಲಂಕಾರ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಅಲಂಕಾರ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಈ ಮಹನೀಯರ ಜಯಂತಿ ಕಾರ್ಯಕ್ರಮಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande