ನಾರಾಯಣಪುರ ಎಡದಂಡೆ ಕಾಲುವೆ ನೀರು ಹರಿಸಲು ಆಗ್ರಹ: ರೈತ ಸಂಘದಿಂದ ಪ್ರತಿಭಟನೆ
ವಿಜಯಪುರ, 24 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕಡೆಯ ಭಾಗದ ರೈತರಿಗೆ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಝಳಕಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು
ಪ್ರತಿಭಟನೆ


ವಿಜಯಪುರ, 24 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಕಡೆಯ ಭಾಗದ ರೈತರಿಗೆ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಝಳಕಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ, ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ನಾರಾಯಣಪುರ ಎಡದಂಡೆ ಕಾಲುವೆಯ ಡಿಸ್ಟ್ರಿಬ್ಯೂಟರ್ 35ರಿಂದ 46ರವರೆಗೆ, ದಸೂರ ಗ್ರಾಮದ ಕೊನೆಯವರೆಗೂ ಕಾಲುವೆ ಮೂಲಕ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಏಪ್ರಿಲ್ 12ರೊಳಗೆ ನೀರು ಬಿಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇಂಡಿ ತಾಲೂಕಿನ ರೈತರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಚಡಚಣ ತಾಲೂಕಿನ ಡಿಸ್ಟ್ರಿಬ್ಯೂಟರ್ 35ರಿಂದ 46ರವರೆಗೆ ಕೊನೆಯ ಭಾಗದ ರೈತರಿಗೆ ಕಾಲುವೆ ನೀರು ಹರಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಮಸ್ಯೆ ಬಗೆಹರಿಸಲು ಸ್ಥಳೀಯ ಶಾಸಕರು ಹಾಗೂ ಚಡಚಣ ತಾಲೂಕು ಆಡಳಿತ ಮುಂದಾಗುತ್ತಿಲ್ಲ ಎಂದರು.

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಬೆಳೆದ ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚಡಚಣ ತಾಲೂಕಿನ ಕಾಲುವೆ ಕೊನೆಯವರೆಗೂ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಈ ವೇಳೆ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಏಪ್ರಿಲ್ 1ರಿಂದ ಕಾಲುವೆ ಮೂಲಕ ನೀರು ಹರಿಸಲಾಗುವುದು. ಏಪ್ರಿಲ್ 12ರವರೆಗೆ ಡಿಸ್ಟ್ರಿಬ್ಯೂಟರ್ 35ರಿಂದ 46ರವರೆಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಕಾಲುವೆಯ ಮೇಲ್ಭಾಗದ ರೈತರು ತಮ್ಮ ಮೋಟಾರ್ ಪಂಪ್ಗಳನ್ನು ಒಂದು ಅಥವಾ ಎರಡು ದಿನ ಬಂದ್ ಮಾಡಿ ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಗಠಾಣ ಮತಕ್ಷೇತ್ರದ ಚಡಚಣ ತಾಲೂಕಿನ ಹಲಸಂಗಿ, ಗೋಟ್ಯಾಳ, ಮಣಕಂಲಗಿ, ಏಳಗಿ, ಕೇರೂರ, ಉಮರಾಣಿ, ತದ್ದೇವಾಡಿ, ಕಂಚನಾಳ, ಲೋಣಿ ಬಿಕೆ, ಹಾವಿನಾಳ, ಹತ್ತಳ್ಳಿ, ರೇವತಗಾಂವ, ದಸೂರ, ಉಮರಜ, ನೀವರಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಹಲವು ಬಾರಿ ಅಧಿಕಾರಿಗಳು ಕೊನೆಯ ಭಾಗದ ರೈತರಿಗೆ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದ್ದರೂ, ಕೊನೆಯ ಭಾಗಕ್ಕೆ ನೀರು ತಲುಪಿಲ್ಲ ಎಂದು ರೈತರು ಆರೋಪಿಸಿದರು. ಇಂಡಿ ತಾಲೂಕಿನ ಕಾಲುವೆಗಳು ತುಂಬಿ ಹರಿಯುತ್ತಿದ್ದರೂ ಚಡಚಣ ತಾಲೂಕು ತಲುಪುವ ಮುನ್ನವೇ ನೀರಿನ ಹರಿವು ನಿಲ್ಲುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ರೈತರಿಗೆ ಹೋರಾಟ ಕೈಬಿಡುವಂತೆ ಮನವಿ ಮಾಡಿದ ಬಳಿಕ ಪ್ರತಿಭಟನೆಯನ್ನು ಮೊಟಕು ಮಾಡಲಾಯಿತು.

ಪ್ರತಿಭಟನೆಯಲ್ಲಿ ಇಂಡಿ ತಹಶೀಲ್ದಾರ್ ವಿಜಯ ಕಡಕಬಾವಿ, ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ಶ್ರೀಮಂತ ಅಂಗಡಿ ಸೇರಿದಂತೆ ರೈತ ಮುಖಂಡರಾದ ವಸಂತ ಭೈರಮಡಿ, ದಯಾನಂದ ಕುಮಸಳೆ, ಅಲೋಕ ಭೈರಮಡಿ, ಎಂ.ಹೆಚ್. ಪೂಜಾರಿ, ಖಾಜೀಸಾಹೇಬ ಗುರುನಾಳ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ ತಳಕೇರಿ, ಸಿದ್ದು ಕೊಟಲಗಿ, ಶಿವಾನಂದ ಬಿರಾದಾರ, ಸತೀಶ ತೊಳನೂರ, ಸಂದೀಪ ಬೆಳ್ಳಿ, ದಯಾನಂದ ಕೊಳಿ ಸೇರಿದಂತೆ ಹಲವು ಗ್ರಾಮಗಳ ರೈತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande