
ಧಾರವಾಡ, 24 ಮಾರ್ಚ್ (ಹಿ.ಸ.):
ಆ್ಯಂಕರ್:ಪರಮಹಂಸ ಯೋಗಾನಂದ ಅವರ ಕ್ರಿಯಾ ಯೋಗದ ಬೋಧನೆಗಳ ಆಧಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವು ಮಾರ್ಚ್ 25ರಂದು ಸಂಜೆ 6ರಿಂದ 7.15ರ ವರೆಗೆ ಧಾರವಾಡದ ಹೋಟೆಲ್ ಗ್ರ್ಯಾಂಡ್ ಮಾಸ್ಟಿವ್‌ನಲ್ಲಿ ನಡೆಯಲಿದೆ ಎಂದು ಸ್ವಾಮಿ ಸ್ಮರಣಾನಂದ ಗಿರಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗಾನಂದರ ಉಪದೇಶಗಳು ಹಾಗೂ ವೈಜ್ಞಾನಿಕ ಧ್ಯಾನದ ಆಧ್ಯಾತ್ಮಿಕ ಮಹತ್ವದ ಕುರಿತ ಉಪನ್ಯಾಸದ ನಂತರ ಆಸಕ್ತರಿಗೆ ಧ್ಯಾನದ ಕೆಲವು ಮೂಲಭೂತ ತಂತ್ರಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.
1917ರಲ್ಲಿ ಪರಮಹಂಸ ಯೋಗಾನಂದ ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಸಂಸ್ಥೆ ಶೀಘ್ರದಲ್ಲೇ ಕ್ರಿಯಾ ಯೋಗ ಪಾಠಗಳನ್ನು ಕನ್ನಡದಲ್ಲಿ ಪರಿಚಯಿಸಲು ಮುಂದಾಗಿದೆ. ಇದರಿಂದ ಪ್ರಾಚೀನ ಹಾಗೂ ವೈಜ್ಞಾನಿಕ ಧ್ಯಾನ ವಿಧಾನಗಳು ಕನ್ನಡಭಾಷಿಕ ಆತ್ಮಸಾಧಕರಿಗೆ ತಮ್ಮ ಮಾತೃಭಾಷೆಯಲ್ಲಿ ಲಭ್ಯವಾಗಲಿವೆ ಎಂದು ವಿವರಿಸಿದರು.
ಈ ಪಾಠಗಳು ಈಗಾಗಲೇ ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ಸಾವಿರಾರು ಸಾಧಕರು ಆಂತರಿಕ ಪರಿವರ್ತನೆ ಅನುಭವಿಸುತ್ತಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಸಂಸ್ಥೆ ಶಾಂತಿ, ಆಂತರಿಕ ಭದ್ರತೆ ಹಾಗೂ ಶಾಶ್ವತ ಸಂತೋಷದ ಸಂದೇಶವನ್ನು ಹಂಚಿಕೊಳ್ಳುತ್ತಿದೆ ಎಂದು ಹೇಳಿದರು.
ಯೋಗಾನಂದರು ಬೋಧಿಸಿದ ಧ್ಯಾನದ ವೈಜ್ಞಾನಿಕ ವಿಧಾನಗಳ ಮೂಲಕ ಸಾಧಕರು ಕ್ರಮಬದ್ಧವಾಗಿ ಕ್ರಿಯಾ ಯೋಗ ತಂತ್ರಗಳನ್ನು ಮನೆಮೂಲಕ ಪತ್ರಾಚಾರ ಪಾಠಕ್ರಮದ ಮೂಲಕ ಕಲಿಯಬಹುದು. ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಸಾಧನೆ ನಡೆಸುವ ಅವಕಾಶವೂ ಇದರಲ್ಲಿ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಶ್ರೇಯಾನಂದ ಗಿರಿ ಅವರು, ಯೋಗದಾ ಸತ್ಸಂಗ ಸೊಸೈಟಿ ದೇಶದಾದ್ಯಂತ ಆನ್‌ಲೈನ್ ಹಾಗೂ ಪ್ರತ್ಯಕ್ಷ ಧ್ಯಾನ ಕೇಂದ್ರಗಳನ್ನು ನಡೆಸುತ್ತಿದ್ದು, ಭಕ್ತರು ಸಾಮೂಹಿಕ ಧ್ಯಾನ ಹಾಗೂ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಸಂಸ್ಥೆ ಭಾರತದಲ್ಲಿ ಐದು ಆಶ್ರಮಗಳನ್ನು ಹೊಂದಿದ್ದು, ಸಾಧಕರಿಗೆ ಶಿಬಿರಗಳು ಮತ್ತು ಆಧ್ಯಾತ್ಮಿಕ ತರಬೇತಿಗಳಲ್ಲಿ ಭಾಗವಹಿಸುವ ಅವಕಾಶವಿದೆ ಎಂದು ಹೇಳಿದರು.
ಕನ್ನಡ ಆವೃತ್ತಿಯ ಪಾಠಗಳ ಪ್ರಕಟಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa