

ಗಂಗಾವತಿ, 24 ಮಾರ್ಚ್ (ಹಿ.ಸ.)
ಆ್ಯಂಕರ್ : ಇದು ಸ್ಪರ್ಧಾತ್ಮಕ ಯುಗ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಫಲ್ಯತೆ ಗಳಿಸುವುದು ಸುಲಭ ಸಾಧ್ಯವಲ್ಲ. ಆಳವಾದ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಹಗರಿಬೊಮ್ಮನಹಳ್ಳಿಯ ಜಿವಿಪಿಪಿ ಸರಕಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರಪ್ಪ ಬಿ. ಹೇಳಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಶ್ರಯದಲ್ಲಿ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ಅಧ್ಯಯನದ ಮಹತ್ವ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ಅಧ್ಯಯನದ ಮಹತ್ವ ದೊಡ್ಡಮಟ್ಟದಲ್ಲಿದೆ. ಸಾಮಾನ್ಯ ಪತ್ರಿಕೆಯ ನೂರು ಪ್ರಶ್ನೆಗಳಲ್ಲಿ ಸುಮಾರು 15-20 ಪ್ರಶ್ನೆಗಳು ಇತಿಹಾಸ ವಿಷಯವನ್ನು ಆಧರಿಸಿರುತ್ತವೆ. ಇತಿಹಾಸದ ಅಧ್ಯಯನದಲ್ಲಿ ಮೂಲಾಧಾರಗಳು ಮತ್ತು ಸಾಂಸ್ಕೃತಿಕ ಇತಿಹಾಸದ ಕಾಲಾನುಕ್ರಮದ ಹಾಗೂ ಕಾರ್ಯಕಾರಣ ಸಂಬಂಧದ ಗ್ರಹಿಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಜಿ.ಗುರಿಕಾರ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಆಸಕ್ತಿ, ಕಲಿಕೆ ಮತ್ತು ಗ್ರಹಿಕೆ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಇತಿಹಾಸ ಓದುವುದಕ್ಕಷ್ಟೇ ಸೀಮಿತವಾಗಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿನ ಇತಿಹಾಸ ಸೃಷ್ಟಿಸಲು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕೆಂದರೆ ಟೇಬಲ್, ಕುರ್ಚಿ, ಜಗಮಗಿಸುವ ಬೆಳಕು ಇರಬೇಕೆಂದಿಲ್ಲ. ಡಾ.ಬಾಬಾಸಾಹೇಬ್ ಅಂಬೇಡ್ಕರ್, ಡಾ.ಅಬ್ದುಲ್ ಕಲಾಂ ಅವರ ಬದುಕು ನಮಗೆ ಪ್ರೇರಣೆಯಾಗಬೇಕು. ನಾಯಿಕೊಡೆಗಳಂತಿರುವ ತರಬೇತಿ ಕೇಂದ್ರಗಳಲ್ಲಿ ಕಲಿತರೆ ಯಶಸ್ಸು ಸಿಗುತ್ತದೆ ಎಂಬುದು ತಪ್ಪು ಗ್ರಹಿಕೆ. ಮನೆಯಲ್ಲೇ ಕುಳಿತು ಕಂಠಪಾಠ ಮಾಡುವುದಕ್ಕಿಂತ ವಿಷಯದ ಎಲ್ಲ ಆಯಾಮಗಳನ್ನು ಅರಿತು ಓದಿ, ಗ್ರಹಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಪಡೆಯಬಹುದು ಎಂದರು.
ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಇಬ್ರಾಹೀಂ ಸಾಬ ಪ್ರಾಸ್ತಾವಿಕ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ವಿಷಯ ಮೇಲಿರುವ ಮಹತ್ವವನ್ನು ತಿಳಿಸಿದರು.
ಇತಿಹಾಸ ವಿಭಾಗದ ಉಪನ್ಯಾಸಕ ಡಾ.ಮಣಿಕಂಠ ನಿರೂಪಿಸಿದರು. ಡಾ.ಅಯ್ಯಾಳಿ ಯರಿಸ್ವಾಮಿ ಸ್ವಾಗತಿಸಿದರು. ಅಮರೇಶ ವಂದಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ, ಡಾ.ಚನ್ನಬಸಪ್ಪ ಕುಂಬಾರ, ರವಿ, ಅರ್ಥಶಾಸ್ತ್ರ ವಿಭಾಗದ ಡಾ.ಜೆ.ಕೃಷ್ಣ, ರವಿ.ಎ.ಎನ್, ಇತಿಹಾಸ ವಿಭಾಗದ ಡಾ.ಇಬ್ರಾಹಿಂ ಸಾಬ, ಭೌತಶಾಸ್ತ್ರ ವಿಭಾಗದ ಡಾ.ಅಣ್ಣೋಜಿ ರೆಡ್ಡಿ.ಆರ್, ದೈಹಿಕ ಶೀಕ್ಷಣ ವಿಭಾಗದ ಡಾ.ಅನಿಲ್ಕುಮಾರ್ ಎಡ್ವರ್ಡ್, ದೈಹಿಕ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಶೋಭಾ ಕೆ.ಎಸ್., ರಾಜ್ಯಶಾಸ್ತ್ರ ವಿಭಾಗದ ಬಾರಿಕಾರ ಫಣಿರಾಜ, ಐಕ್ಯೂಎಸಿ ಸಂಚಾಲಕ ಮಂಜುನಾಥ.ಕೆ.ಎಚ್., ಗಣಕ ವಿಜ್ಞಾನ ವಿಭಾಗದ ರವಿಕುಮಾರ, ನಿರ್ವಹಣಾಶಾಸ್ತ್ರ ವಿಭಾಗದ ಅಶ್ರಫ್ ಅಳ್ಳಳ್ಳಿ, ಅನಿತಾ ಕೆ.ಎಂ., ಅನಿಲ್ಕುಮಾರ.ಎ., ವಾಣಿಜ್ಯಶಾಸ್ತ್ರ ವಿಭಾಗದ ಅಕ್ಕಿ ಮಾರುತಿ, ಮೆಹತಾಬ್ ಅಂಜುಮ್, ರಸಾಯನಶಾಸ್ತ್ರ ವಿಭಾಗದ ಡಾ.ಏಟಕೂರಿ ದೊರಬಾಬು, ಮಲ್ಲಿಕಾರ್ಜುನ, ಸುಮಲತಾ.ಎಸ್, ಪ್ರಾಣಿಶಾಸ್ತ್ರ ವಿಭಾಗದ ಸಲೀಂ, ಭೂಮಿಕಾ.ಎ., ಗಣಿತಶಾಸ್ತ್ರ ವಿಭಾಗದ ಡಾ.ಅಶೋಕ.ಕೆ., ಸಸ್ಯಶಾಸ್ತ್ರ ವಿಭಾಗದ ನಯನ.ಎಸ್., ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್, ಪತ್ರಾಂಕಿತ ವ್ಯವಸ್ಥಾಪಕರಾದ ರಾಘಮ್ಮ ಸಿ., ಪ್ರಥಮ ದರ್ಜೆ ಸಹಾಯಕರಾದ ಪ್ರತಿಭಾ ಮುದಗಲ್, ಅಧೀಕ್ಷಕರಾದ ಶಾಮೀದ್, ಗಣಕಯಂತ್ರ ನಿರ್ವಾಹಕ ವೀರೇಶ ಹಾಗೂ ಇತರೆ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್