ಬಲ್ಡೋಟ ತೊಲಗಿಸಿ 145ನೇ ದಿನದ ಧರಣಿ ; ಕರಿಯಣ್ಣ ಸ್ಮರಣೆ
ಕೊಪ್ಪಳ, 24 ಮಾರ್ಚ್ (ಹಿ.ಸ.) ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸಿರುವ ಅನಿರ್ದಿಷ್ಟವಾದಿ ಧರಣಿಯ 145ನೇ ದಿನದ ಹೋರಾಟದಲ್ಲಿ ಜಿಲ್ಲೆಯ ರಾಜಕೀಯ ಧುರೀಣರಾಗಿದ್ದ ಕರಿಯಣ
ಬಲ್ಡೋಟ ತೊಲಗಿಸಿ 145ನೇ ದಿನದ ಧರಣಿ ; ಕರಿಯಣ್ಣ ಸ್ಮರಣೆ


ಕೊಪ್ಪಳ, 24 ಮಾರ್ಚ್ (ಹಿ.ಸ.)

ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸಿರುವ ಅನಿರ್ದಿಷ್ಟವಾದಿ ಧರಣಿಯ 145ನೇ ದಿನದ ಹೋರಾಟದಲ್ಲಿ ಜಿಲ್ಲೆಯ ರಾಜಕೀಯ ಧುರೀಣರಾಗಿದ್ದ ಕರಿಯಣ್ಣ ಸಂಗಟಿ ಅವರಿಗೆ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ಅವರು ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಇರಲಿಲ್ಲ. ಪರಿಸರ ಉಳಿಸಲು ಅವರು ಮಾಡಿದ ಹೋರಾಟ ಬಹಳ ದೊಡ್ಡದು. ಕೊಪ್ಪಳ ಜಿಲ್ಲೆಗೆ ಧುತ್ತೆಂದು ಕಾಲಿಟ್ಟು ಸ್ಥಾಪನೆಗೆ ಮುಂದಾದ ವಿದ್ಯುತ್ ಅಣುಸ್ಥಾವರ ಘಟಕದ ವಿರುದ್ದ ಹೋರಾಟವನ್ನು ನಮ್ಮ ವೇದಿಕೆಯ ಸಹಭಾಗಿತ್ವ ಇಟ್ಟುಕೊಂಡು ಪಟ್ಟು ಬಿಡದೇ ಅರಸಿನಕೇರಿ ಸುತ್ತಲಿನ ಜನರನ್ನು ಸಂಘಟಿಸಿ ಹೋರಾಟಕ್ಕೆ ನೇತೃತ್ವಕೊಟ್ಟರು. ಅಲ್ಲದೆ ಚಿಕ್ಕಬೆಣಕಲ್ ಟೋಲ್ ಗೇಟ್ ಬಂದ್ ಮಾಡಿ ಹೋರಾಡಿ ಅಣುಸ್ಥಾವರ ಇಲ್ಲಿಂದ ತೊಲಗಿಸಿದ್ದನ್ನು ಸ್ಮರಿಸಿದರು. ಕೊನೆ ದಿನಗಳಲ್ಲಿ ಖಾಯಿಲೆ ಬಿದ್ದು ಹೋರಾಟದಿಂದ ದೂರ ಉಳಿದಿದ್ದರು.

ಅವರ ಸಾವು ಜಿಲ್ಲೆಯ ಜನರಿಗೆ ತುಂಬಲಾರದ ನಷ್ಟವಾಗಿದೆ. ಅದರಲ್ಲಿ ನಮ್ಮ ಪರಿಸರ ಹೋರಾಟ ಅವರ ಹೋರಾಟದ ಪ್ರೇರಣೆಯನ್ನು ಪಡೆದುಕೊಂಡು ಮುಂದೆ ಸಾಗುತ್ತದೆ ಎಂದರು.

ನಿನ್ನೆ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಧರಣಿ ಹೋರಾಟದಲ್ಲಿ ಸಹ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿಎಂ ಸಿದ್ದರಾಮಯ್ಯ ಅವರ ಜಿತೆಗೆ ಸರ್ವಪಕ್ಷ ನಿಯೋಗದ ಭೇಟಿ ಅನಿವಾರ್ಯ ಕಾರಣಗಳಿಂದಾಗಿ ಮುಂದಕ್ಕೆ ಹೋಗಿದ್ದು, ಆದಷ್ಟು ಶೀಘ್ರ ಮತ್ತೊಂದು ದಿನಾಂಕ ಗೊತ್ತುಪಡಿಸಲಾಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ಅವರು ಭರವಸೆ ನೀಡಿದರು. ಶೀಘ್ರ ಜಿಲ್ಲೆಯ ಸರ್ವ ಪಕ್ಷಗಳ ಮತ್ತು ಹೋರಾಟ ವೇದಿಕೆಯ ಮುಖಂಡರ ನಿಯೋಗ ಕೊಂಡೊಯ್ದು ಮುಖ್ಯಮಂತ್ರಿಗಳನ್ನು ಕಂಡು ಜೀವ, ಆರೋಗ್ಯ ಹಾನಿ ಮಾಡುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಲು ಮನವರಿಕೆ ಮಾಡುತ್ತೇವೆ ಎಂದರು. ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಹೋರಾಟ ವೇದಿಕೆಯ ಮುಖಂಡರಾದ ರಾಜು ಬಾಕಳೆ, ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಗಡಾದ, ವಿದ್ಯಾ ನಾಲ್ವಾಡ, ಸರೋಜಾ ಬಾಕಳೆ, ಬಿ.ಜಿ. ಕರಿಗಾರ, ಮಹಾದೇವಪ್ಪ ಮಾವಿನಮಡು, ಪಂಪಣ್ಣ ಚಿಂತಪಲ್ಲಿ, ರಾಜಶೇಖರ ಏಳುಬಾವಿ, ವೈ. ಸತ್ಯನಾರಾಯಣ, ಮಂಜುನಾಥ ಜಿ. ಗೊಂಡಬಾಳ, ಡಾ. ಬಸವರಾಜ ಪೂಜಾರ ಅವರು ಯಲಮಗೇರಿಯ ಕರಿಯಣ್ಣ ಸಂಗಟಿ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆದರು. ಧರಣಿಯಲ್ಲಿ ಶಿವಕುಮಾರ ಕುಕನೂರು, ಎಸ್.ಬಿ. ರಾಜೂರು, ಗಾಳೆಪ್ಪ ಎಸ್. ಕಡೆಮನಿ, ದ್ಯಾಮಪ್ಪ ಜಿ. ಕರಿಗಾರ, ಶರಣು ಗಡ್ಡಿ, ಸೋಮಲಿಂಗಪ್ಪ ಗಿರಡ್ಡಿ, ಯಂಕಪ್ಪ ಉಪ್ಪಾರ ಕಾಸನಕಂಡಿ, ಶರಣಪ್ಪ ವಣಗೇರಿ, ಶಿವಪ್ಪ ಜಲ್ಲಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ್, ನಾಗರಾಜ ಕುಷ್ಟಗಿ ಲಾಚನಕೇರಿ, ಕೊಟ್ರೇಶಪ್ಪ, ರೇವಣಸಿದ್ದಯ್ಯ ಚಿತ್ರಗಾರ, ಗಂಗಮ್ಮ ಕೊಡೇಕಲ್ ಇತರರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande