
ಗದಗ, 17 ಮಾರ್ಚ್ (ಹಿ.ಸ.)
ಆ್ಯಂಕರ್: ಗದಗ ಜಿಲ್ಲೆಯಲ್ಲಿ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ಗಳ ಅಭಾವ ಉಂಟಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, “ಸದ್ಯ ಯಾವುದೇ ರೀತಿಯ ಸಿಲಿಂಡರ್ ಕೊರತೆ ಇಲ್ಲ, ಮೋದಿ ಸರ್ಕಾರದ ಅವಧಿಯಲ್ಲಿ ಇಂಧನ ಪೂರೈಕೆ ವ್ಯವಸ್ಥೆ ಸಮರ್ಪಕವಾಗಿದೆ” ಎಂದು ಹೇಳಿದ್ದಾರೆ.
ಸೋಮವಾರ ನಡೆದ ದಿ. ಕೆ.ಎಚ್. ಪಾಟೀಲರ 101ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉಲ್ಲೇಖಿಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಪ್ರಮುಖ ಸಚಿವರುಗಳಾದ ಇಂಧನ ಸಚಿವ ಕೆ.ಜೆ. ಚಾರ್ಚ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲರ ಸಮ್ಮುಖದಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಿಲಿಂಡರ್ ಕೊರತೆ ಕಾಣಿಸಲಿಲ್ಲ. ಆದರೆ ಸಾಮಾನ್ಯ ಜನರಿಗೆ ಮಾತ್ರ ಅಭಾವ ಇದೆ ಎಂದು ಹೇಳುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಟೀಕೆ
ರಾಜ್ಯದಲ್ಲಿ ಸಿಲಿಂಡರ್ ಕೊರತೆ ಇದೆ ಎಂದು ಹೇಳಿ ರಸ್ತೆಗಳಲ್ಲಿ ಸೌದೆ ಒಲೆ ಹಚ್ಚಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಟೀಕಿಸಿದ ಕುರಡಗಿ, “ಜನರಲ್ಲಿ ಭಯ ಹಾಗೂ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಜನಪ್ರತಿನಿಧಿಗಳ ಕಾರ್ಯಕ್ರಮಗಳಿಗೆ ಸಿಲಿಂಡರ್ ಸುಲಭವಾಗಿ ಲಭ್ಯವಾಗುತ್ತಿರುವಾಗ, ಸಾರ್ವಜನಿಕರಿಗೆ ಮಾತ್ರ ತೊಂದರೆ ಎನ್ನುವುದು ರಾಜಕೀಯ ನಾಟಕವೇ?” ಎಂದು ಆರೋಪಿಸಿದ್ದಾರೆ.
ಅಕ್ರಮ ದಾಸ್ತಾನು ಆರೋಪ
“ಕಾರ್ಯಕ್ರಮಗಳಿಗೆ ಅಗತ್ಯವಾದ ಸಿಲಿಂಡರ್ಗಳನ್ನು ಅಕ್ರಮ ದಾಸ್ತಾನಿನಿಂದ ತರಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಂಬಂಧಿತ ಸಚಿವರು ಸ್ಪಷ್ಟನೆ ನೀಡಬೇಕು. ಜನರಿಗೆ ಕೊರತೆ, ಆದರೆ ರಾಜಕೀಯ ಕಾರ್ಯಕ್ರಮಗಳಿಗೆ ಸಮೃದ್ಧ ಪೂರೈಕೆ – ಇದು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ನೀತಿ ಮೆಚ್ಚುಗೆ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಕೇಂದ್ರ ಸರ್ಕಾರ ಇಂಧನ ಭದ್ರತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. “ರಾಜ್ಯತಾಂತ್ರಿಕ ಕೌಶಲ್ಯದ ಮೂಲಕ ಕೇಂದ್ರ ಸರ್ಕಾರ ದೇಶದ ಇಂಧನ ಪೂರೈಕೆಯನ್ನು ಕಾಪಾಡುತ್ತಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಬದಲು ರಾಜಕೀಯ ಲಾಭಕ್ಕಾಗಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಟೀಕಿಸಿದರು.
ಜನರಿಗೆ ಮನವಿ
ಇಂತಹ ಆರೋಪ-ಪ್ರತ್ಯಾರೋಪಗಳ ನಡುವೆ ಜನತೆ ವಾಸ್ತವಾಂಶವನ್ನು ಗಮನಿಸಬೇಕು ಎಂದು ಮನವಿ ಮಾಡಿದ ಕುರಡಗಿ, “ರಾಜ್ಯದ ಜನರು ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP