ಎಲ್ಪಿಜಿ ಪೂರೈಕೆ ಸಮಸ್ಯೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ
ಗದಗ, 17 ಮಾರ್ಚ್ (ಹಿ.ಸ.) ಆ್ಯಂಕರ್: ಗದಗ ಜಿಲ್ಲೆಯಾದ್ಯಂತ ಎಲ್ಪಿಜಿ (ಅಡುಗೆ ಅನಿಲ) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬ, ಹೆಚ್ಚುವರಿ ಹಣ ವಸೂಲಿ, ಬುಕ್ಕಿಂಗ್ ಮಾಡಿದ ನಂತರವೂ ಸಮಯಕ್ಕೆ ಸಿಲಿಂಡರ್ ದೊರೆಯದಿರುವಂತಹ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಅಹವಾಲುಗಳ ಹಿನ್ನೆಲೆ, ಗದಗ ಜಿಲ್ಲಾಡಳ
ಫೋಟೋ


ಗದಗ, 17 ಮಾರ್ಚ್ (ಹಿ.ಸ.)

ಆ್ಯಂಕರ್: ಗದಗ ಜಿಲ್ಲೆಯಾದ್ಯಂತ ಎಲ್ಪಿಜಿ (ಅಡುಗೆ ಅನಿಲ) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬ, ಹೆಚ್ಚುವರಿ ಹಣ ವಸೂಲಿ, ಬುಕ್ಕಿಂಗ್ ಮಾಡಿದ ನಂತರವೂ ಸಮಯಕ್ಕೆ ಸಿಲಿಂಡರ್ ದೊರೆಯದಿರುವಂತಹ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಅಹವಾಲುಗಳ ಹಿನ್ನೆಲೆ, ಗದಗ ಜಿಲ್ಲಾಡಳಿತವು ಮಹತ್ವದ ಕ್ರಮ ಕೈಗೊಂಡಿದ್ದು, ಗ್ರಾಹಕರಿಗೆ ತ್ವರಿತ ಪರಿಹಾರ ಒದಗಿಸಲು ವಿಶೇಷ ಸಹಾಯವಾಣಿ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಈ ಕುರಿತು ಮಾಹಿತಿ ನೀಡಿ, ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯಾವುದೇ ರೀತಿಯ ಅನ್ಯಾಯ ಅಥವಾ ಸೇವಾ ಲೋಪವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ಗ್ಯಾಸ್ ವಿತರಣಾ ಏಜೆನ್ಸಿಗಳ ಮಾಲೀಕರು, ಪ್ರತಿನಿಧಿಗಳು ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ಶಿಸ್ತು ಹಾಗೂ ಪಾರದರ್ಶಕತೆ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಜಿಲ್ಲಾಧಿಕಾರಿಗಳು ತಿಳಿಸಿದಂತೆ, ಸರ್ಕಾರದ ನಿಯಮಾನುಸಾರ ಎಲ್ಪಿಜಿ ಪೂರೈಕೆ ನಡೆಯಬೇಕು. ಗ್ರಾಹಕರಿಗೆ ಅನ್ಯಾಯವಾಗುವ ಯಾವುದೇ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಿತ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿಳಂಬಕ್ಕೆ ಕಡಿವಾಣ – 25 ದಿನಗಳಲ್ಲಿ ಪೂರೈಕೆ ಕಡ್ಡಾಯ, ಸಾಮಾನ್ಯವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡಿದ ಬಳಿಕ 25 ದಿನಗಳೊಳಗೆ ಪೂರೈಕೆ ಆಗಬೇಕು. ಆದರೆ ಕೆಲವಡೆ ಉದ್ದೇಶಪೂರ್ವಕ ವಿಳಂಬ, ಹೆಚ್ಚುವರಿ ಶುಲ್ಕ ವಸೂಲಿ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಲಾಗಿದೆ.

ಡಿಜಿಟಲ್ ವ್ಯವಸ್ಥೆಗಳ ಬಳಕೆಗೂ ಒತ್ತು

ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು ಐವಿಆರ್ಎಸ್, ಮಿಸ್ಡ್ ಕಾಲ್, ವಾಟ್ಸಪ್, ಮೊಬೈಲ್ ಅಪ್ಲಿಕೇಶನ್ಗಳು, ಫೋನ್ಪೆ, ಪೇಟಿಎಂ ಸೇರಿದಂತೆ ಎಂ ಎಂ ಸಿ ಪೋರ್ಟಲ್ಗಳನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗಿದೆ.

ಇದರಿಂದ ಪಾರದರ್ಶಕತೆ ಹೆಚ್ಚಲು ಹಾಗೂ ಸೇವಾ ವಿಳಂಬ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕುವಾರು ಸಹಾಯವಾಣಿ ವಿವರಗಳು:

ಜಿಲ್ಲಾಡಳಿತವು ತಾಲೂಕು ಹಾಗೂ ನಗರ/ಗ್ರಾಮೀಣ ಮಟ್ಟದಲ್ಲಿ ಪ್ರತ್ಯೇಕ ಸಂಪರ್ಕ ಸಂಖ್ಯೆಗಳನ್ನೂ ಬಿಡುಗಡೆ ಮಾಡಿದೆ, ಇದರಿಂದ ಗ್ರಾಹಕರು ನೇರವಾಗಿ ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದಾಗಿದೆ.

ಉಪನಿರ್ದೇಶಕರ ಕಚೇರಿ (ಗದಗ): 08372-239443

ಗದಗ ನಗರ: 9481241607 / 9972956834

ಗದಗ ಗ್ರಾಮೀಣ: 9916763033 / 9606301190

ರೋಣ ತಾಲೂಕು: 9916890282 / 6364381607

ನರಗುಂದ ತಾಲೂಕು: 9606281029

ಗಜೇಂದ್ರಗಡ: 9916890282 / 8105201560

ಮುಂಡರಗಿ: 9980252047

ಶಿರಹಟ್ಟಿ: 7829960469

ಲಕ್ಷ್ಮೇಶ್ವರ: 96164249118

ಗ್ರಾಹಕರಿಗೆ ಮನವಿ – ಹಕ್ಕುಗಳ ಅರಿವು ಇರಲಿ

ಎಲ್ಪಿಜಿ ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು. ಹೆಚ್ಚುವರಿ ಹಣ ಕೇಳಿದರೆ ಅಥವಾ ಸೇವೆಯಲ್ಲಿ ಲೋಪ ಕಂಡುಬಂದರೆ ಮೌನವಾಗಿರದೆ ತಕ್ಷಣ ದೂರು ಸಲ್ಲಿಸುವುದು ಮುಖ್ಯ. ಜಿಲ್ಲಾಡಳಿತವು ಪ್ರತಿಯೊಂದು ಅಹವಾಲಿಗೂ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಎಚ್ಚರಿಕೆ ಏಜೆನ್ಸಿಗಳಿಗೆ

ಗ್ಯಾಸ್ ವಿತರಣಾ ಏಜೆನ್ಸಿಗಳು ನಿಯಮಾನುಸಾರ ಸೇವೆ ನೀಡದಿದ್ದಲ್ಲಿ, ಪರವಾನಗಿ ರದ್ದುಪಡಿಸುವುದರಿಂದ ಹಿಡಿದು ಕಾನೂನು ಕ್ರಮವರೆಗೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆ ಮಾಡುವಂತೆ ಸೂಚಿಸಲಾಗಿದೆ.

ಸಭೆಯಲ್ಲಿ ಗ್ಯಾಸ್ ಏಜೆನ್ಸಿಗಳ ಮಾಲೀಕರು, ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಒಟ್ಟಾರೆ, ಗದಗ ಜಿಲ್ಲಾಡಳಿತದ ಈ ಸಹಾಯವಾಣಿ ವ್ಯವಸ್ಥೆ ಎಲ್ಪಿಜಿ ಗ್ರಾಹಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande