ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಕಲ ಸಿದ್ಧತೆ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
ಶಿವಮೊಗ್ಗ, 17 ಮಾರ್ಚ್ (ಹಿ.ಸ.): ಆ್ಯಂಕರ್: ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯ ಒಟ್ಟು 79 ಪರೀ
ಎಸ್ಎಸ್ಎಲ್ಸಿ ಪರೀಕ್ಷೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಕಲ ಸಿದ್ಧತೆ: ಡಿಸಿ ಪ್ರಭುಲಿಂಗ ಕವಳಿಕಟ್ಟಿ


ಶಿವಮೊಗ್ಗ, 17 ಮಾರ್ಚ್ (ಹಿ.ಸ.):

ಆ್ಯಂಕರ್:

ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗಾಗಿ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯ ಒಟ್ಟು 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಭದ್ರಾವತಿ (15), ಹೊಸನಗರ (7), ಸಾಗರ (9), ಶಿಕಾರಿಪುರ (11), ಶಿವಮೊಗ್ಗ (20), ಸೊರಬ (10) ಹಾಗೂ ತೀರ್ಥಹಳ್ಳಿ (7) ಕೇಂದ್ರಗಳನ್ನು ಹೊಂದಿದೆ. ಈ ಬಾರಿ ಒಟ್ಟು 23,262 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಪರೀಕ್ಷೆಗಳು ಸುಗಮ ಹಾಗೂ ಪಾರದರ್ಶಕವಾಗಿ ನಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಅವ್ಯವಹಾರ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ 3 ವಿಚಕ್ಷಣಾ ದಳಗಳನ್ನು ರಚಿಸಲಾಗಿದ್ದು, ಡಯಟ್ ವತಿಯಿಂದ ಜಾಗೃತ ದಳಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಪ್ರತಿ ಕೇಂದ್ರಕ್ಕೆ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಹಾಗೂ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಗ್ರೂಪ್ ‘ಬಿ’ ಅಧಿಕಾರಿಗಳನ್ನು ಸ್ಥಳೀಯ ಜಾಗೃತ ದಳದ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದ್ದು, ಸಮೀಪದ ಜೆರಾಕ್ಸ್ ಹಾಗೂ ಸೈಬರ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಕೇಂದ್ರಗಳೊಳಗೆ ಮೊಬೈಲ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ಗೌಪ್ಯ ವಸ್ತುಗಳ ಸುರಕ್ಷಿತ ಸಂಗ್ರಹ ಹಾಗೂ ವಿತರಣೆಯನ್ನು “ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಮ್” ಅಡಿಯಲ್ಲಿ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಖಜಾನೆಗಳಲ್ಲಿ ಸಶಸ್ತ್ರ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷಾ ಮೇಲ್ವಿಚಾರಣೆಗೆ 15 ಸಿಬ್ಬಂದಿಗಳ ತಂಡವನ್ನು ರಚಿಸಲಾಗಿದ್ದು, ಕೊಡಚಾದ್ರಿ ಸಭಾಂಗಣದಲ್ಲಿ ನೇರ ವೀಕ್ಷಣೆ ನಡೆಯಲಿದೆ. ವಿದ್ಯುತ್ ಪೂರೈಕೆ ನಿರಂತರವಾಗಿರಲು ಮೆಸ್ಕಾಂ ಕ್ರಮ ಕೈಗೊಂಡಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೂರದ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವವರಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande