
ಕೊಪ್ಪಳ, 17 ಮಾರ್ಚ್ (ಹಿ.ಸ.)
ಆ್ಯಂಕರ್: ಪ್ರವಾಸೋದ್ಯಮ ಇಲಾಖೆ ವತಿಯಿಂದ 2025–26ನೇ ಸಾಲಿನ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸಲು ಮೊಬೈಲ್ ಕ್ಯಾಂಟೀನ್ ಕುರಿತು ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 55 ವರ್ಷದೊಳಗಿರಬೇಕು. 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.2 ಲಕ್ಷ ಮಿತಿಯೊಳಗಿರಬೇಕು. ಗ್ರಾಮಾಂತರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷ ಮಿತಿಯೊಳಗಿರಬೇಕು. ಯಾವ ಜಿಲ್ಲೆಯ ನಿವಾಸಿಯಾಗಿರುತ್ತಾರೋ ಅದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರನು ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.
ಜಿಲ್ಲಾಮಟ್ಟದ ಪ್ರವಾಸೋದ್ಯಮ ಕಛೇರಿಗಳಿಂದ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ಪ್ರತಿ ಹಾಗೂ ಆದಾಯ ಪ್ರಮಾಣ ಪತ್ರದ ಪ್ರತಿ, ಚಾಲ್ತಿಯಲ್ಲಿರುವ ಲಘು ವಾಹನ ಚಾಲನಾ ಪರವಾನಗಿ ಪ್ರತಿ, ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಅರ್ಜಿದಾರನು ಯಾವುದೇ ಸರ್ಕಾರಿ ಇಲಾಖೆ, ನಿಗಮ ಮಂಡಳಿಯಲ್ಲಿ ಖಾಯಂ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿಲ್ಲವೆಂದು ಮತ್ತು ಮೊಬೈಲ್ ಕ್ಯಾಂಟೀನ್ ಫಲಾನುಭವಿಯಾಗಿ ಆಯ್ಕೆಯಾದ ಬಳಿಕ ಪ್ರವಾಸೋದ್ಯಮ ಇಲಾಖೆಯಿಂದ ನೀಡುವ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಕಾರ್ಯಕ್ರಮದ ತರಬೇತಿಯನ್ನು ಕಡ್ಡಾಯವಾಗಿ ಪಡೆಯುತ್ತೇನೆ ಎಂದು ರೂ.100/-ರ ಬೆಲೆಯ ಛಾಪಾ ಕಾಗದ, ಅರ್ಜಿದಾರರ ವಾಸಸ್ಥಳ ದೃಢೀಕರಣದ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ದ್ವಿಪ್ರತಿಯಲ್ಲಿ ಮಾರ್ಚ್ 30 ರೊಳಗೆ ಇಲಾಖೆಯ ಜಿಲ್ಲಾ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಗಳನ್ನು ಉಚಿತವಾಗಿ ಕಛೇರಿಯ ವೇಳೆಯಲ್ಲಿ ಪಡೆಯತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, 2ನೇ ಮಹಡಿ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ಕಛೇರಿ ಹಾಗೂ ದೂರವಾಣಿ ಸಂಖ್ಯೆ: 08539-225566 ಗೆ ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್