

ಬಳ್ಳಾರಿ, 17 ಮಾರ್ಚ್ (ಹಿ.ಸ.)
ಆ್ಯಂಕರ್: ತುಂಗಭದ್ರ ಜಲಾಶಯದಿಂದ ಬಲದಂಡೆಯ ಕೆಳಮಟ್ಟದ ಕಾಲುವೆ (ಎಲ್.ಎಲ್.ಸಿ)ಯಲ್ಲಿ ಕುಡಿಯುವ ನೀರಿಗಾಗಿ ನೀರು ಬಿಡಲು ಆಗ್ರಹಿಸಿ ತುಂಗಭದ್ರಾ ರೈತ ಸಂಘ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದೆ.
ತುಂಗಭದ್ರಾ ರೈತ ಸಂಘದ ಅಧ್ಯಕ್ಷರಾದ ಡಾ. ಪುರುಷೋತ್ತಮಗೌಡ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ದಿನಾಂಕ 14.11.2025 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸುತ್ತಿರುವ ಕಾರಣ ಬೇಸಿಗೆ ಕೃಷಿಗೆ ನೀರು ನೀಡಲು ಸಾಧ್ಯವಿಲ್ಲ ಎಂದು ನಿರ್ಧರಿಸಲಾಗಿತ್ತು. ಆದರೆ, ಕುಡಿಯುವ ನೀರಿಗಾಗಿ 20.03.2026 ರಿಂದ ಎಲ್ಲಾ ಕಾಲುವೆಗಳಿಗೆ ನೀರು ಬಿಡುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಆದರೆ, 16.03.2026 ರಂದು ಎಡದಂಡೆ ಕಾಲುವೆಗೆ ಮಾತ್ರ ನೀರು ಬಿಡುಗಡೆ ಮಾಡಲಾಗಿದೆ. ಆದರೆ ಬಲದಂಡೆಯ ಕೆಳಮಟ್ಟದ ಕಾಲುವೆ ವ್ಯಾಪ್ತಿಯ ಕಂಪ್ಲಿ, ಕುರುಗೋಡು, ಸಿರುಗುಪ್ಪ ಹಾಗೂ ಬಳ್ಳಾರಿ ತಾಲ್ಲೂಕುಗಳಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ. ಈ ಭಾಗದ ಕೆರೆಗಳು ಸಂಪೂರ್ಣ ಒಣಗಿದ್ದು, ಹಳ್ಳಗಳು ಹಾಗೂ ಹಗರಿ ನದಿಯಲ್ಲೂ ನೀರಿಲ್ಲ. ಕಾರಣ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರಣ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್