
ಬೆಂಗಳೂರು, 17 ಮಾರ್ಚ್ (ಹಿ.ಸ.):
ಆ್ಯಂಕರ್:
ಗ್ರಾಮೀಣ ಹಾಗೂ ನಗರ ಹೊರವಲಯಗಳಲ್ಲಿ ಆರೋಗ್ಯ ಸೇವೆಯನ್ನು ಇನ್ನಷ್ಟು ವೇಗವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಸಿಎಸ್‌ಆರ್ ಯೋಜನೆಯಡಿ ಆಶಾ ಕಾರ್ಯಕರ್ತರಿಗೆ ಉಚಿತ ಎಲೆಕ್ಟ್ರಿಕ್ ಬೈಕ್‌ಗಳನ್ನು ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದ ಆರೋಗ್ಯಸೌಧ ಆವರಣದಲ್ಲಿ ‘ಆರೋಗ್ಯ ಸಂಚಾರಿ’ ಕಾರ್ಯಕ್ರಮದಡಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಯುನೈಟೆಡ್ ವೇ ಆಫ್ ಬೆಂಗಳೂರು ಮತ್ತು ಹೆಲ್ಥಿಯಂ ಮೆಡ್‌ಟೆಕ್ ಸಂಸ್ಥೆಗಳ ಸಹಯೋಗದಲ್ಲಿ ಸಿಎಸ್‌ಆರ್ ಯೋಜನೆಯಡಿ ಇ-ಬೈಕ್‌ಗಳನ್ನು ವಿತರಿಸಲಾಗುತ್ತಿದೆ. ಮೊದಲ ಹಂತದಲ್ಲಿ ತುಮಕೂರು, ಬೆಂಗಳೂರು ದಕ್ಷಿಣ (ರಾಮನಗರ), ಜಿಬಿಎ ಹಾಗೂ ಬೆಂಗಳೂರು ನಗರ ಜಿಲ್ಲೆಯ ಆಯ್ದ ಕೇಂದ್ರಗಳಿಗೆ ಒಟ್ಟು 69 ಇ-ಬೈಕ್‌ಗಳನ್ನು ನೀಡಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ದೂರದ ಊರುಗಳಿಗೆ ತೆರಳಲು ಸಾರಿಗೆ ಸಮಸ್ಯೆ ಎದುರಿಸುತ್ತಿದ್ದರು. ಈಗ ಈ ಇ-ಬೈಕ್‌ಗಳ ನೆರವಿನಿಂದ ಅವರು ಸಕಾಲದಲ್ಲಿ ಜನರ ಮನೆಬಾಗಿಲಿಗೆ ಭೇಟಿ ನೀಡಿ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಈ ವಾಹನಗಳೊಂದಿಗೆ ಹೆಲ್ಮೆಟ್, ನೀರಿನ ಬಾಟಲಿ ಹಾಗೂ ರೈನ್‌ಕೋಟ್‌ಗಳನ್ನು ಸಹ ಒದಗಿಸಲಾಗುತ್ತಿದೆ. ಮುಂದಿನ ಹಂತಗಳಲ್ಲಿ ಇತರ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸಲು ಸಂಬಂಧಿತ ಸಂಸ್ಥೆಗಳು ಸಮ್ಮತಿ ಸೂಚಿಸಿವೆ.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಗುರುದತ್ ಹೆಗಡೆ, ಎನ್‌ಎಚ್‌ಎಮ್ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಮೆನನ್, ನಿರ್ದೇಶಕ ವಸಂತ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa