ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದೊಳಗೆ ಟಿಕೆಟ್ ಪೈಪೋಟಿ
ಬಾಗಲಕೋಟೆ, 17 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ವಿಸ್ತರಿಸುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ದಿವಂಗತ ನಾಯಕ ಹೆಚ್.
Bgk


ಬಾಗಲಕೋಟೆ, 17 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ವಿಸ್ತರಿಸುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ದಿವಂಗತ ನಾಯಕ ಹೆಚ್. ವೈ. ಮೇಟಿ ಅವರ ಕುಟುಂಬದಲ್ಲೇ ಉದ್ಭವಿಸಿರುವ ಟಿಕೆಟ್ ಪೈಪೋಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಮೇಟಿ ಕುಟುಂಬದಲ್ಲಿ ನಾಲ್ಕು ಆಕಾಂಕ್ಷಿಗಳು – ಒಳಜಗಳ ಬಹಿರಂಗ:

ಮೇಟಿ ಕುಟುಂಬದೊಳಗೆ ನಾಲ್ವರು ಸದಸ್ಯರು ಟಿಕೆಟ್ ಮೇಲೆ ಹಕ್ಕು ಸಾಧಿಸಿರುವುದು ಕಾಂಗ್ರೆಸ್ಗೆ ತಲೆನೋವಾಗಿದೆ. ಈ ಪೈಕಿ ಮಹಾದೇವಿ ಮೇಟಿ ತಮ್ಮದೇ ಪ್ರಬಲ ಹಕ್ಕು ಮಂಡಿಸಿ, “ಪಕ್ಷ ಟಿಕೆಟ್ ನೀಡದಿದ್ದರೆ ಮಾರ್ಚ್ 20ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಖಚಿತ” ಎಂದು ಘೋಷಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಹಾದೇವಿ ಅವರು ತಾವು ಮಹಿಳಾ ಅಭ್ಯರ್ಥಿಯಾಗಿ ಪಕ್ಷಕ್ಕೆ ಹೆಚ್ಚುವರಿ ಬಲ ನೀಡುವೆನೆಂದು ವಾದಿಸಿದ್ದಾರೆ. “ಪಕ್ಷ ನನಗೆ ಟಿಕೆಟ್ ನೀಡಿದರೆ ಮಹಿಳೆಗೆ ಅವಕಾಶ ನೀಡಿದ ಗೌರವ ಕಾಂಗ್ರೆಸ್ಗೆ ಸಲ್ಲುತ್ತದೆ” ಎಂಬ ಮಾತಿನ ಮೂಲಕ ಮಹಿಳಾ ಪ್ರತಿನಿಧಿತ್ವದ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ. ಕ್ಷೇತ್ರದ ವಾರ್ಡ್ ಮಟ್ಟದಲ್ಲಿ ತಮಗೆ ಉತ್ತಮ ಬೆಂಬಲವಿದೆ ಎಂದು ಮಹಾದೇವಿ ಮೇಟಿ, ಹಿಂದುಸ್ತಾನ ಸಮಾಚಾರ ಪ್ರತಿನಿಧಿ ಬಳಿ ಹೇಳಿಕೊಂಡಿದ್ದಾರೆ.

ಸಹೋದರರ ಪೈಪೋಟಿ – ಒಗ್ಗಟ್ಟಿಗೆ ಧಕ್ಕೆ

ಮೇಟಿ ಕುಟುಂಬದ ಮತ್ತಿಬ್ಬರು ಸದಸ್ಯರಾದ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ ಕೂಡ ಟಿಕೆಟ್ಗೆ ಬಲವಾಗಿ ಪೈಪೋಟಿ ನೀಡುತ್ತಿದ್ದಾರೆ. ಇಬ್ಬರೂ ತಮ್ಮದೇ ಬಣಗಳನ್ನು ರೂಪಿಸಿಕೊಂಡು ಪಕ್ಷದ ಮೇಲೆ ಒತ್ತಡ ತರುತ್ತಿರುವುದು ಗೋಚರಿಸುತ್ತಿದೆ.

ಮಹಾದೇವಿ ಅವರು ಸ್ಪಷ್ಟವಾಗಿ “ಉಮೇಶ್ಗೆ ಟಿಕೆಟ್ ನೀಡಿದರೆ ಬೆಂಬಲಿಸುತ್ತೇನೆ. ಮಲ್ಲಿಕಾರ್ಜುನರಿಗೆ ನೀಡಿದರೆ ಸ್ಪರ್ಧೆ ಅನಿವಾರ್ಯ” ಎಂದು ಹೇಳಿರುವುದು ಕುಟುಂಬದೊಳಗಿನ ಬಿರುಕುಗಳನ್ನು ಬಹಿರಂಗಪಡಿಸಿದೆ. ಈ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್ಗೆ ನೇರ ಎಚ್ಚರಿಕೆಯಂತೆ ಕಾಣುತ್ತಿದೆ.

ಹೈಕಮಾಂಡ್ ಮಧ್ಯಸ್ಥಿಕೆ – ಸಮಾಧಾನದ ಪ್ರಯತ್ನ

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಪ್ರಭಾಕರ್, ಮೇಟಿ ಕುಟುಂಬದ ನಾಲ್ವರು ಸದಸ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಬೆಂಗಳೂರಿನಲ್ಲಿ ಬುಧವಾರದಂದು ಸಭೆಗೆ ಆಹ್ವಾನಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಪಕ್ಷದ ಒಳಜಗಳ ತಣ್ಣಗಾಗಿಸಲು ಮತ್ತು ಒಂದೇ ಅಭ್ಯರ್ಥಿಯ ಹಿಂದೆ ಎಲ್ಲರನ್ನು ಒಗ್ಗೂಡಿಸಲು ಹೈಕಮಾಂಡ್ ತೀವ್ರ ಪ್ರಯತ್ನ ನಡೆಸುತ್ತಿದೆ. ಆದರೆ ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಗಾಢವಾಗಿರುವ ಹಿನ್ನೆಲೆ, ಈ ಸಮಾಧಾನ ಪ್ರಕ್ರಿಯೆ ಎಷ್ಟು ಯಶಸ್ವಿಯಾಗಲಿದೆ ಎಂಬುದು ಪ್ರಶ್ನಾರ್ಥಕವಾಗಿದೆ.

ರಾಜಕೀಯ ಲೆಕ್ಕಾಚಾರ – ಕುಟುಂಬದ ಮೇಲೆ ಅವಲಂಬನೆ ಎಷ್ಟು ಸೂಕ್ತ?

ಕಾಂಗ್ರೆಸ್ ಎದುರಿಸುತ್ತಿರುವ ಪ್ರಮುಖ ಪ್ರಶ್ನೆ ಎಂದರೆ, ಮೇಟಿ ಕುಟುಂಬದೊಳಗಿನ ಯಾರಿಗಾದರೂ ಟಿಕೆಟ್ ನೀಡುವುದು ಗೆಲುವಿಗೆ ಖಚಿತ ಮಾರ್ಗವೇ ಎಂಬುದು. ಒಂದು ಕಡೆ ಕುಟುಂಬದ ಹೆಸರು ಮತ್ತು ಮತಬ್ಯಾಂಕ್ ಕಾಂಗ್ರೆಸ್ಗೆ ಬಲ ನೀಡಬಹುದು. ಆದರೆ ಮತ್ತೊಂದೆಡೆ ಒಳಜಗಳಗಳು ಮತಗಳ ವಿಭಜನೆಗೆ ಕಾರಣವಾಗುವ ಸಾಧ್ಯತೆ ಇದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಒಂದೇ ಕುಟುಂಬದೊಳಗಿನ ಬಹು ಆಕಾಂಕ್ಷಿಗಳು ಇರುವ ಪರಿಸ್ಥಿತಿಯಲ್ಲಿ ಟಿಕೆಟ್ ಹಂಚಿಕೆ ಅತ್ಯಂತ ಸೂಕ್ಷ್ಮ ವಿಷಯವಾಗುತ್ತದೆ. ತಪ್ಪು ನಿರ್ಧಾರ ಕೈಗೊಂಡರೆ ಅಸಮಾಧಾನಿತ ಬಣಗಳು ಬಂಡಾಯಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗುತ್ತದೆ.

ಬಿಜೆಪಿ ಪಾಳಯದಲ್ಲೂ ಚಟುವಟಿಕೆ ಪೈಪೋಟಿ

ಇದರ ಮಧ್ಯೆ ಬಿಜೆಪಿ ಪಾಳಯದಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿರುವುದು ಸ್ಪರ್ಧೆಯನ್ನು ಇನ್ನಷ್ಟು ಕಠಿಣಗೊಳಿಸಿದೆ. ಕಾಂಗ್ರೆಸ್ ಒಳಜಗಳವನ್ನು ಬಿಜೆಪಿ ರಾಜಕೀಯವಾಗಿ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ಹುಡುಕುತ್ತಿದೆ.

ಕಾಂಗ್ರೆಸ್ಗೆ ಕಠಿಣ ಪರೀಕ್ಷೆ

ಒಟ್ಟಾರೆ ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಚುನಾವಣೆಯಷ್ಟೇ ಅಲ್ಲ, ಒಳಜಗಳಗಳನ್ನು ಸಮರ್ಥವಾಗಿ ನಿರ್ವಹಿಸುವ ಪರೀಕ್ಷೆಯೂ ಆಗಿದೆ. ಮೇಟಿ ಕುಟುಂಬದೊಳಗಿನ ಪೈಪೋಟಿಯನ್ನು ಸಮತೋಲನಗೊಳಿಸಿ, ಒಗ್ಗಟ್ಟಿನ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ಪಕ್ಷದ ಗೆಲುವಿನ ಕೀಲಿಕೈ.

ಮುಂಬರುವ ದಿನಗಳಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನ ಹಾಗೂ ಅಸಮಾಧಾನಿತ ಆಕಾಂಕ್ಷಿಗಳ ನಡೆ-ನುಡಿಗಳು ಈ ಚುನಾವಣೆಯ ದಿಕ್ಕನ್ನು ನಿರ್ಧರಿಸಲಿವೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande