

ಗದಗ, 15 ಮಾರ್ಚ್ (ಹಿ.ಸ.)
ಆ್ಯಂಕರ್:ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲ್ಲಾಪುರ ಗ್ರಾಮದ ಹೊಲವೊಂದರಲ್ಲಿ ಹೈನಿಡೇ ಕುಟುಂಬಕ್ಕೆ ಸೇರಿದ ಪಟ್ಟೆಕತ್ತೆಕಿರುಬ (ಹೈನಾ) ಎರಡು ಮರಿಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಕತ್ತೆಕಿರುಬಗಳು ಈ ಭಾಗದಲ್ಲಿ ಸಂತಾನೋತ್ಪತ್ತಿಗೆ ಹೊಸ ವಲಯ ಕಂಡುಕೊಂಡಿರುವುದು ಜೀವವೈವಿಧ್ಯ ಸಂರಕ್ಷಣಾ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಕತ್ತೆಕಿರುಬಗಳು ಶುಷ್ಕ ಹಾಗೂ ಅರೆಶುಷ್ಕ ಪ್ರದೇಶಗಳಲ್ಲಿ, ಪೊದೆಗಳಿಂದ ಕೂಡಿದ ಕಲ್ಲಿನ ಬೆಟ್ಟಗುಡ್ಡಗಳು ಮತ್ತು ತೆರೆದ ಕಾಡು ಪ್ರದೇಶಗಳಲ್ಲಿ ವಾಸಿಸುವುದಕ್ಕೆ ಹೆಸರುವಾಸಿಯಾಗಿವೆ. ತಮ್ಮದೇ ಆದ ದೊಡ್ಡ ಬಿಲಗಳನ್ನು ನಿರ್ಮಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಪ್ರಾಣಿಗಳು ಹಗಲಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು, ಮರಿಗಳಿಗೆ ಜನ್ಮ ನೀಡಲು ಹಾಗೂ ಅವುಗಳನ್ನು ಪೋಷಿಸಲು ಗುಡ್ಡಗಳಲ್ಲಿನ ನೈಸರ್ಗಿಕ ಗುಹೆಗಳು ಅಥವಾ ಬಿಲಗಳನ್ನು ಆಶ್ರಯಿಸುತ್ತವೆ. ಆದರೆ ಈ ಬಾರಿ ಕಲ್ಲಾಪುರ ಗ್ರಾಮದ ಕೃಷಿ ಹೊಲದಲ್ಲೇ ಕತ್ತೆಕಿರುಬವು ಮರಿಗಳಿಗೆ ಜನ್ಮ ನೀಡಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ.
ಈ ಕುರಿತು ಮಾಹಿತಿ ದೊರಕಿದ ತಕ್ಷಣ ಜೀವವೈವಿಧ್ಯ ಸಂಶೋಧಕರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲ್ಲಾಪುರ ಗ್ರಾಮದ ಹೊಲದಲ್ಲಿ ಪಟ್ಟೆಕತ್ತೆಕಿರುಬವು ಮರಿಗಳನ್ನು ಹಾಕಿದ ಮಾಹಿತಿ ತಿಳಿದ ಕೂಡಲೇ ಸುತ್ತಮುತ್ತಲಿನ ಐದು ರಿಂದ ಆರು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಹೊಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಜೊತೆಗೆ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪಟ್ಟೆಕತ್ತೆಕಿರುಬಗಳ ಮಹತ್ವ ಮತ್ತು ಅವುಗಳ ಜೀವನ ಶೈಲಿಯ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದ್ದಾರೆ.
ಕತ್ತೆಕಿರುಬಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪ್ರಾಣಿಗಳಾಗಿವೆ. ಅವು ಸಣ್ಣ ಪ್ರಾಣಿಗಳನ್ನು ಬೇಟೆಯಾಡಬಲ್ಲ ಸಾಮರ್ಥ್ಯ ಹೊಂದಿದ್ದರೂ, ಸಾಮಾನ್ಯವಾಗಿ ಸತ್ತ ಪ್ರಾಣಿಗಳ ಮಾಂಸ ಅಥವಾ ದೊಡ್ಡ ಪ್ರಾಣಿಗಳು ಬೇಟೆಯಾಡಿ ಉಳಿಸಿದ ಮಾಂಸವನ್ನು ಆಹಾರವಾಗಿ ಸೇವಿಸುತ್ತವೆ. ಈ ಮೂಲಕ ಪ್ರಕೃತಿಯಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡುತ್ತವೆ. ಬೇಸಿಗೆಯ ಕಾಲದಲ್ಲಿ ಆಹಾರ ಕೊರತೆ ಉಂಟಾದರೆ ಸೌತೆಕಾಯಿ, ಕಲ್ಲಂಗಡಿ ಹಾಗೂ ಖರಬೂಜ ಹಣ್ಣುಗಳನ್ನು ಸಹ ಸೇವಿಸುವುದು ಅವುಗಳ ವಿಶೇಷ ಗುಣವಾಗಿದೆ ಎಂದು ಮಂಜುನಾಥ ಎಸ್. ನಾಯಕ ವಿವರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಆವಾಸಸ್ಥಾನಗಳ ನಾಶ, ಮಾನವ ಚಟುವಟಿಕೆಗಳ ವಿಸ್ತರಣೆ ಮತ್ತು ಆಹಾರ ಕೊರತೆ ಕಾರಣಗಳಿಂದ ಪಟ್ಟೆಕತ್ತೆಕಿರುಬಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಪರಿಸರ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುವ ಹೈನಾಗಳನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೊಂದೆಡೆ ರೈತರ ಸುರಕ್ಷತೆ ಹಾಗೂ ಕತ್ತೆಕಿರುಬಗಳ ರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆ ಕೂಡ ಕ್ರಮ ಕೈಗೊಂಡಿದೆ. ಕಲ್ಲಾಪುರದಲ್ಲಿ ಕಂಡುಬಂದ ಕತ್ತೆಕಿರುಬ ಮತ್ತು ಅದರ ಎರಡು ಮರಿಗಳನ್ನು ಸದ್ಯಕ್ಕೆ ಸಮೀಪದ ಕುಳಗೇರಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅವುಗಳ ಚಲನವಲನಗಳ ಮೇಲೆ ಇಲಾಖೆ ನಿರಂತರ ನಿಗಾ ವಹಿಸುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಆನಂದ ಹಳೆಹೊಳಿ ತಿಳಿಸಿದ್ದಾರೆ.
ಕೃಷಿ ಹೊಲದಲ್ಲಿ ಕತ್ತೆಕಿರುಬವು ಮರಿಗಳಿಗೆ ಜನ್ಮ ನೀಡಿರುವ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಜೀವವೈವಿಧ್ಯ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಸ್ಮರಿಸುವಂತಾಗಿದೆ. ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಿ ಇಂತಹ ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP