
ಬೆಂಗಳೂರು, 15 ಮಾರ್ಚ್ (ಹಿ.ಸ.):
ಆ್ಯಂಕರ್:
ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಅಪ್ರತಿಮ ವೇಗವನ್ನು ಪ್ರದರ್ಶಿಸುತ್ತಿದೆ. 2025-26ನೇ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಅಂದಾಜನ್ನು ಶೇ.7.6ಕ್ಕೆ ಏರಿಸಲಾಗಿದೆ. ಯುದ್ಧ ಸಂಘರ್ಷದ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ರಾಷ್ಟ್ರಗಳು ತತ್ತರಿಸುತ್ತಿದ್ದರೆ, ಭಾರತ ಅದನ್ನೆಲ್ಲ ಮೆಟ್ಟಿ ನಿಂತು ಆರ್ಥಿಕ ಅಭಿವೃದ್ಧಿಯ ಪಥದಲ್ಲಿದೆ.
2025-26ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಾದ ಗಮನಾರ್ಹ ಬೆಳವಣಿಗೆ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಶೇ.8.4 ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಅಭಿವೃದ್ಧಿ ಕಂಡುಬಂದಿರುವುದು ದೇಶದ ಆರ್ಥಿಕ ಸ್ಥಿರತೆಗೆ ಸಾಕ್ಷಿಯಾಗಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ 2025-26ರ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯ ಅಂದಾಜನ್ನು ಶೇಕಡಾ 7.6ಕ್ಕೆ ಹೆಚ್ಚಿಸಿರುವುದನ್ನು ಪ್ರದರ್ಶಿಸಿದೆ.
ಈ ಮಹತ್ತರ ಏರಿಕೆಗೆ ಆರ್ಥಿಕತೆ ಲೆಕ್ಕಾಚಾರದ ‘ಆಧಾರ ವರ್ಷ’ವನ್ನು 2011-12ರ ಬದಲು ಇದೀಗ 2022-23ಕ್ಕೆ ಬದಲಾಯಿಸಿರುವುದೇ ಮುಖ್ಯ ಕಾರಣ. ಈ ಪರಿಷ್ಕರಣೆ ಭಾರತದ ಪ್ರಸ್ತುತ ಆರ್ಥಿಕ ರಚನೆ ಮತ್ತು ಹೊಸ ಮಾರುಕಟ್ಟೆ ದತ್ತಾಂಶಗಳನ್ನು ಅತ್ಯಂತ ಹೆಚ್ಚು ನಿಖರವಾಗಿ ಪ್ರತಿಬಿಂಬಿಸುತ್ತಿದೆ.
ಹೊಸ ಸರಣಿಯ ರಾಷ್ಟ್ರೀಯ ಲೆಕ್ಕಪತ್ರಗಳು ಆರ್ಥಿಕತೆಯಲ್ಲಾದ ಇತ್ತೀಚಿನ ಪ್ರಮುಖ ಬದಲಾವಣೆಗಳನ್ನು ಮತ್ತು ಹೊಸ ದತ್ತಾಂಶ ಮೂಲಗಳನ್ನು ಒಳಗೊಂಡಿವೆ. ಇದು ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದಂತಹ ಪ್ರಮುಖ ಆರ್ಥಿಕ ಸೂಚಕಗಳನ್ನು ಹೆಚ್ಚು ವೈಜ್ಞಾನಿಕವಾಗಿ ವಿಶ್ಲೇಷಿಸಲು ಸಾಧ್ಯವಾಗಲಿದೆ.
2025ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಭಾರತದ ಆರ್ಥಿಕತೆಯು ಶೇ.7.8ರಷ್ಟು ನೈಜ ಬೆಳವಣಿಗೆಯನ್ನು ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಅಂದರೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.7.3ರಷ್ಟು ಬೆಳೆಯಲಿದೆ ಎಂಬುದು ಕೆಲ ಅಧಿಕೃತ ವರದಿಗಳ ಆಶಾಭಾವನೆ..
ಭಾರತವು ಕಳೆದ ಕೆಲವು ವರ್ಷಗಳಿಂದ ಸತತವಾಗಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, 2021-22ರಲ್ಲಿ ಶೇ.8.7 ಮತ್ತು 2022-23ರಲ್ಲಿ ಶೇ.7.2ರಷ್ಟು ಬೆಳವಣಿಗೆ ದಾಖಲಾಗಿತ್ತು. ನಂತರದ ವರ್ಷಗಳಾದ 2023-24 ಮತ್ತು 2024-25 ರಲ್ಲಿ ಕ್ರಮವಾಗಿ ಶೇ.7.2 ಮತ್ತು 7.1ರಷ್ಟು ಪ್ರಗತಿ ಸಾಧಿಸಿದೆ.
ರೇಟಿಂಗ್ ಏಜೆನ್ಸಿ ಐಸಿಆರ್ ಎ ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನದೇ ಆದ ಅಂದಾಜನ್ನು ನೀಡಿದೆ. 2027ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.0ರಷ್ಟಿರಲಿದೆ ಎಂದು ಅಂದಾಜಿಸಿದೆ. ಇದು ಸರ್ಕಾರದ ಅಂದಾಜಿಗಿಂತ ಸ್ವಲ್ಪ ಕಡಿಮೆಯಿದ್ದರೂ, ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಪ್ರಗತಿ ಎಂಬುದಕ್ಕೆ ನಿದರ್ಶನ ತೋರಿದೆ.
ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ:
ಭಾರತದ ಆರ್ಥಿಕ ಸುಧಾರಣೆಯಲ್ಲಿ ಪ್ರಮುಖವಾಗಿ ಅಮೆರಿಕದೊಂದಿಗೆ ಮಾಡಿಕೊಂಡ ಮಧ್ಯಂತರ ವ್ಯಾಪಾರ ಒಪ್ಪಂದ ಪ್ರಮುಖ ಪಾತ್ರ ವಹಿಸಿದೆ. ಕಡಿಮೆ ಸುಂಕದ ದರಗಳು ಭಾರತೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಒದಗಿಸಿದ್ದು, ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ.
ಬಜೆಟ್ ಕೊಡುಗೆ ಮತ್ತು ತೆರಿಗೆ ಕಡಿತ:
ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕೆ ನೀಡಿದ ಉತ್ತೇಜನ ದೇಶೀಯ ಹೂಡಿಕೆಗೆ ಬಲ ತುಂಬಿದೆ. ಇದರೊಂದಿಗೆ ಜಿಎಸ್‌ಟಿ ದರಗಳಲ್ಲಿನ ಸತತ ಕಡಿತ ಮತ್ತು ಹಣದುಬ್ಬರ ನಿಯಂತ್ರಣ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದೆ.
ಕೃಷಿ ವಲಯದ ಚೇತರಿಕೆ, ಉತ್ಪಾದನಾ ವಲಯದ ವೃದ್ಧಿ ಮತ್ತು ಗ್ರಾಹಕರ ಖರೀದಿ ಉಮೇದು ಭವಿಷ್ಯದಲ್ಲಿ ಖಾಸಗಿ ಹೂಡಿಕೆಗೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ. ಈ ಬೆಳವಣಿಗೆ ಭಾರತವನ್ನು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಮುಂದುವರಿಸಲು ಬಲ ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪರಿಣಾಮಕಾರಿ ಆರ್ಥಿಕ ನೀತಿಗಳು, ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನಾ ಉತ್ತೇಜನ ಹಾಗೂ ಹೂಡಿಕೆ ಸ್ನೇಹಿ ವಾತಾವರಣ ನಿರ್ಮಾಣದಿಂದ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಈ ಸುಧಾರಣಾ ಕ್ರಮಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ಹಾಗೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ರೂಪಿಸಲು ಮಹತ್ವದ ಪಾತ್ರ ವಹಿಸುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa