
ಶ್ರೀನಗರ, 15 ಮಾರ್ಚ್ (ಹಿ.ಸ.):
ಆ್ಯಂಕರ್:
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆ ಬಳಿ ನಡೆದ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಒಬ್ಬ ಪಾಕಿಸ್ತಾನಿ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ.
ಸೇನೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ದೊರೆತ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಾರ್ಚ್ 14 ಮತ್ತು 15ರ ಮಧ್ಯರಾತ್ರಿ ಉರಿ ಸೆಕ್ಟರ್‌ನ ಬುಚಾರ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಕುರಿತು ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.
ಕಾರ್ಯಾಚರಣೆ ವೇಳೆ ಪೊದೆಗಳಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಸೈನಿಕರು ಹೊಂಚು ದಾಳಿ ನಡೆಸಿದರು. ಭಯೋತ್ಪಾದಕನಿಗೆ ಸವಾಲು ಹಾಕುತ್ತಿದ್ದಂತೆ ಆತ ವಿವೇಚನಾರಹಿತವಾಗಿ ಗುಂಡಿನ ದಾಳಿ ನಡೆಸಿದನು. ಬಳಿಕ ನಡೆದ ಪ್ರತಿದಾಳಿಯಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕನು ಸಾವನ್ನಪ್ಪಿದ್ದಾನೆ ಎಂದು ಸೇನೆ ತಿಳಿಸಿದೆ.
ಸ್ಥಳದಿಂದ ಎಕೆ ರೈಫಲ್, ಪಿಸ್ತೂಲ್ ಸೇರಿದಂತೆ ದೊಡ್ಡ ಪ್ರಮಾಣದ ಮದ್ದುಗುಂಡುಗಳು ಹಾಗೂ ಇತರೆ ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ನಿಯಂತ್ರಣ ರೇಖೆ ಮೂಲಕ ನಡೆಯುತ್ತಿದ್ದ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa