ಅಡಿಗೆ ಅನಿಲ ಕೊರತೆ: ಸಂಕಷ್ಟದಲ್ಲಿ ಹೋಟೆಲ್ ಉದ್ಯಮ
ಬೆಂಗಳೂರು, 12 ಮಾರ್ಚ್ (ಹಿ.ಸ.): ಆ್ಯಂಕರ್:ಅಡಿಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ಪರಿಣಾಮವಾಗಿ ರಾಜ್ಯದ ಹೋಟೆಲ್ ಮತ್ತು ಉಪಹಾರ ಗೃಹ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ
Food


ಬೆಂಗಳೂರು, 12 ಮಾರ್ಚ್ (ಹಿ.ಸ.):

ಆ್ಯಂಕರ್:ಅಡಿಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದ ಪರಿಣಾಮವಾಗಿ ರಾಜ್ಯದ ಹೋಟೆಲ್ ಮತ್ತು ಉಪಹಾರ ಗೃಹ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತಿರುವ ಲಕ್ಷಣಗಳು ಕಂಡುಬರುತ್ತಿವೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಕೊರತೆಯಿಂದ ಅನೇಕ ಹೋಟೆಲ್‌ಗಳು ತೊಂದರೆ ಎದುರಿಸುತ್ತಿದ್ದು ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ.

ಇತ್ತೀಚಿನ ದಿನಗಳಲ್ಲಿ ಅನಿಲ ಸಿಲಿಂಡರ್‌ಗಳ ಪೂರೈಕೆ ತಡವಾಗುತ್ತಿದ್ದು, ಕೆಲವೆಡೆ ನಿರೀಕ್ಷಿಸಿದಷ್ಟು ಸಿಲಿಂಡರ್‌ಗಳು ದೊರೆಯುತ್ತಿಲ್ಲ. ಇದರಿಂದ ಅಡುಗೆ ವ್ಯವಸ್ಥೆ ನಡೆಸಲು ಕಷ್ಟವಾಗುತ್ತಿದ್ದು, ಕೆಲ ಹೋಟೆಲ್‌ಗಳು ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಬೆಂಗಳೂರಿನ ಉಡುಪಿ ಹೋಟೆಲ್ ಮಾಲಿಕ ಕೃಷ್ಣಕುಮಾರ ತಿಳಿಸಿದ್ದಾರೆ.

ದಿನನಿತ್ಯ ಸಾವಿರಾರು ಜನರು ಉಪಹಾರ ಗೃಹಗಳ ಮೇಲೆ ಅವಲಂಬಿತರಾಗಿದ್ದಾರೆ. ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಊಟ ಮಾಡುವುದರಿಂದ ಅನಿಲ ಕೊರತೆ ಮುಂದುವರಿದರೆ ಸಾರ್ವಜನಿಕರ ಮೇಲೆಯೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಅವರು ಹುಬ್ಬಳ್ಳಿ ಗಜಾನನ ಹೋಟೆಲ್ ಮಾಲಿಕ ಅರವಿಂದ ಮಾನೆ ಎಚ್ಚರಿಸಿದ್ದಾರೆ.

ಸರ್ಕಾರ ತಕ್ಷಣವೇ ಅನಿಲ ಪೂರೈಕೆಯನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೋಟೆಲ್ ಉದ್ಯಮಿಗಳು ಒತ್ತಾಯಿಸಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ವಿತರಣೆಯಲ್ಲಿ ಆದ್ಯತೆ ನೀಡದಿದ್ದರೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಇನ್ನೊಂದೆಡೆ, ಅಡಿಗೆ ಅನಿಲದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಪೊಲೀಸರು ನಿಗಾ ವಹಿಸಿದ್ದು, ಅನಿಲ ವಿತರಣಾ ಕೇಂದ್ರಗಳ ಪರಿಶೀಲನೆ ನಡೆಸಲು ರಾಜ್ಯ ಪೋಲಿಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಎಲ್ಲ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಒಟ್ಟಾರೆ, ಅಡಿಗೆ ಅನಿಲದ ಪೂರೈಕೆ ಸರಾಗವಾಗದಿದ್ದರೆ ರಾಜ್ಯದ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂಬ ಆತಂಕ ಉದ್ಯಮ ವಲಯದಲ್ಲಿ ವ್ಯಕ್ತವಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande