
ನವದೆಹಲಿ, 10 ಮಾರ್ಚ್ (ಹಿ.ಸ.):
ಆ್ಯಂಕರ್:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿಷಯವಾಗಿ ಮಂಗಳವಾರ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದಂತೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ.
ಸಭೆ ಬೆಳಿಗ್ಗೆ 11 ಗಂಟೆಗೆ ಆರಂಭವಾದ ತಕ್ಷಣ ಅಗತ್ಯ ದಾಖಲೆಗಳು ಮತ್ತು ವರದಿಗಳನ್ನು ಮಂಡಿಸಲಾಯಿತು. ಬಳಿಕ ಶೂನ್ಯ ವೇಳೆಯಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಎಸ್‌ಐಆರ್ ವಿಷಯದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದವು.
ಈ ವೇಳೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಪ್ರಶ್ನೆಗಳನ್ನು ಎತ್ತಿದರು. ಈ ಪ್ರಕ್ರಿಯೆಯನ್ನು “ವಂಚನೆ” ಎಂದು ಕರೆದ ಅವರು, ಇದರಿಂದ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಉದ್ಭವಿಸುತ್ತಿವೆ ಮತ್ತು ಅನೇಕ ಕಾನೂನುಬದ್ಧ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಹಾಗೂ ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದನದ ನಾಯಕ ಜೆ.ಪಿ.ನಡ್ಡಾ ಪ್ರತಿ ಪಕ್ಷದ ಆರೋಪಗಳನ್ನು ತಿರಸ್ಕರಿಸಿದರು. ಹಿಂದಿನ ಅಧಿವೇಶನದಲ್ಲೇ ಚುನಾವಣಾ ಸುಧಾರಣೆಗಳ ಕುರಿತು ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು. ಸಂಸತ್ತಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಪ್ರತಿಪಕ್ಷಗಳು ಪದೇ ಪದೇ ಇದೇ ವಿಷಯವನ್ನು ಎತ್ತುತ್ತಿವೆ ಎಂದು ಅವರು ಆರೋಪಿಸಿದರು.
ಪ್ರತಿಪಕ್ಷಗಳು ಸದನದೊಳಗೆ ನಿಜವಾದ ಚರ್ಚೆಯನ್ನು ಬಯಸುವುದಿಲ್ಲ ಮತ್ತು ಗದ್ದಲ ಸೃಷ್ಟಿಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ನಡ್ಡಾ ಟೀಕಿಸಿದರು. ಸಭಾತ್ಯಾಗದ ಕುರಿತು ಪ್ರತಿಕ್ರಿಯಿಸಿದ ಅವರು, ಸದನದಿಂದ ಹೊರನಡೆಯುವ ಮೂಲಕ ಪ್ರತಿಪಕ್ಷಗಳು ಅರ್ಥಪೂರ್ಣ ಚರ್ಚೆಯನ್ನು ತಪ್ಪಿಸುತ್ತಿವೆ ಎಂದು ಆರೋಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa