
ಕಟ್ನಿ,(ಮ.ಪ್ರ) 10 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬರ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 43 ರ ಜಗತ್ಪುರ–ಉಮಾರಿಯಾ ಪ್ರದೇಶದ ಸಮೀಪ ವೇಗವಾಗಿ ಬಂದ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋಮವಾರ ತಡ ರಾತ್ರಿ ಚಫಾನಿ ತಿರುವಿನ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಟ್ನಿಯಿಂದ ಉಮಾರಿಯಾ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಂಪೂರ್ಣವಾಗಿ ಜಜ್ಜಿಹೋಗಿದೆ.
ಮಾಹಿತಿ ತಿಳಿದ ತಕ್ಷಣ ಬರ್ವಾರಾ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಹಾಗೂ ಮೃತರನ್ನು ಬರ್ವಾರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ವೈದ್ಯರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ ಮೃತರ ವಯಸ್ಸು ಸುಮಾರು 20 ರಿಂದ 30 ವರ್ಷಗಳ ನಡುವೆಯಿರಬಹುದು. ತಡರಾತ್ರಿವರೆಗೂ ಅವರ ಗುರುತು ಪತ್ತೆಯಾಗಿಲ್ಲ. ಶವಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಬೈಕ್ ಸಂಖ್ಯೆಯ ಮಾಹಿತಿ ಹಾಗೂ ಅವರ ಬಳಿ ದೊರೆತ ವಸ್ತುಗಳ ಆಧಾರದ ಮೇಲೆ ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಆರಂಭಿಸಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa