
ವಿಜಯಪುರ, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದ್ವಿತೀಯ ಪಿಯುಸಿ ಪರೀಕ್ಷೆ ಪಾರದರ್ಶಕ ಮತ್ತು ನಕಲು ಮುಕ್ತವಾಗಿ ನಡೆಸುವ ದೃಷ್ಟಿಯಿಂದ ನಗರದ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರದಲ್ಲಿ ಸ್ಥಾಪಿಸಲಾದ ಜಿಲ್ಲಾ ವೆಬ್ ಕಾಸ್ಟಿಂಗ್ ಕೇಂದ್ರ ಹಾಗೂ ನಾನಾ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಸಿಇಒ ರಿಷಿ ಆನಂದ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ವೆಬ್ ಕಾಸ್ಟಿಂಗ್ ಕೇಂದ್ರದಲ್ಲಿ ಅಳವಡಿಸಿರುವ ಗಣಕಯಂತ್ರ, ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗಳು ಮತ್ತು ಇಂಟರ್ನೆಟ್ ವ್ಯವಸ್ಥೆಗಳನ್ನು ವೀಕ್ಷಿಸಿದರು. ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಯಾವುದೇ ಸಿಸಿಟಿವಿ ಸ್ಥಗಿತಗೊಳ್ಳದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಒಂದು ವೇಳೆ ಸಿಸಿಟಿವಿಗಳು ಸ್ಥಗಿತಗೊಂಡಿದ್ದಲ್ಲಿ ತುರ್ತಾಗಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪಗಳು ಉಂಟಾಗದಂತೆ ಕಟ್ಟು-ನಿಟ್ಟಾಗಿ ನಡೆಸಬೇಕು ಎಂದರು.
ಬಳಿಕ ಪಿಡಿಜೆ ಪ್ರೌಢಶಾಲೆ, ಸಿಕ್ಯಾಬ್ ಕಾಲೇಜು ಹಾಗೂ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಎನ್ ಐಸಿ ಅಧಿಕಾರಿಗಳಾದ ಶಿವಾನಂದ ಗೂಗವಾಡ, ಜಿಲ್ಲಾ ವೆಬ್ ಕಾಸ್ಟಿಂಗ್ ಕೇಂದ್ರದ ಮುಖ್ಯಸ್ಥರಾದ ಮಹಾಂತೇಶ ಹಿಪ್ಪರಗಿ, ವೆಬ್ ಕಾಸ್ಟಿಂಗ್ ಕೇಂದ್ರದ ಸಹಾಯಕರಾದ ಮಹಾಂತೇಶ ಕನ್ನೂರ, ಜಿಲ್ಲಾ ಪಂಚಾಯತಿಯ ಎ.ಡಿ.ಪಿ.ಎಮ್. ಮಕ್ತುಮಸಾಬ ಮುಲ್ಲಾ, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಪೋಲಿಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande