
ಬೆಂಗಳೂರು, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಸುವರ್ಣೋತ್ಸವ ಸಮಾರಂಭ ಹಾಗೂ 55ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ. ಈ ಮೂರರ ನೆನಪು ಮನುಷ್ಯತ್ವದ ಮೂಲ; ಮನುಷ್ಯತ್ವವೇ ಮೋಕ್ಷಕ್ಕೆ ದಾರಿ” ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಗುರು ಸ್ಥಾನವನ್ನು ಅಲಂಕರಿಸಿರುವ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು.
“ನೀವು ಪಾಠ ಮಾಡಿದ ಮಕ್ಕಳು ಸಮಾಜದಲ್ಲಿ ಎತ್ತರಕ್ಕೇರಿದಾಗ ನಿಮಗೆ ಸಿಗುವ ಸಂತೋಷ ಅಳತೆಯಿಲ್ಲದದ್ದು. ಇತಿಹಾಸವನ್ನು ಸೃಷ್ಟಿಸುವಂತಹ ಮಕ್ಕಳನ್ನು ನೀವು ತಯಾರಿಸಬೇಕು. ಇತಿಹಾಸ ಮರೆತವನು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಮಕ್ಕಳಿಗೆ ದೊಡ್ಡ ಕನಸು ಕಾಣುವಂತೆ ಮಾಡಬೇಕು; ಅದಕ್ಕೆ ಶಿಸ್ತಿನ ಬುನಾದಿ ಪ್ರಾಥಮಿಕ ಹಂತದಲ್ಲೇ ಹಾಕಬೇಕು” ಎಂದು ಅವರು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಹಾಗೂ ರಾಮೋಜಿ ಗೌಡರು ಶಿಕ್ಷಕರ ಪರವಾಗಿ ಸದಾ ಸಹಕಾರ ನೀಡುತ್ತಿರುವುದಾಗಿ ಶ್ಲಾಘಿಸಿದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವುದನ್ನು ಸರ್ಕಾರ ಅರಿತಿದೆ. ನಿನ್ನೆ 56 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹಳ್ಳಿಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು; ಅದನ್ನು ಒದಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರ ಸಂಘಕ್ಕೆ ಬೆಂಗಳೂರಿನಲ್ಲಿ ಜಾಗ ನೀಡಲು ಸರ್ಕಾರ ಸಿದ್ಧವಿದ್ದು, ನಮ್ಮ ಸರ್ಕಾರ ಸದಾ ಶಿಕ್ಷಕರೊಂದಿಗೆ ಇರಲಿದೆ ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa