
ಬೆಂಗಳೂರು, 28 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು. ಸ್ವಾತಂತ್ರ್ಯ ಸಮಯದಲ್ಲಿ 12ರಿಂದ 15 ಶೇಕಡಾ ಇದ್ದ ಶಿಕ್ಷಣದ ಪ್ರಮಾಣ ಇಂದು 74 ಶೇಕಡಾಕ್ಕೆ ಏರಿದೆ. ಆದರೆ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರಕುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಇದು ಶಿಕ್ಷಕರ ತಪ್ಪಲ್ಲ, ಸಾಮಾಜಿಕ ವ್ಯವಸ್ಥೆಯ ಪರಿಣಾಮ. ಜಾತಿ ವ್ಯವಸ್ಥೆ ಸಮಾಜದಲ್ಲಿ ಗಾಢವಾಗಿ ನೆಲೆಯೂರಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣದ ಅಗತ್ಯ
ಸಂವಿಧಾನವು ಪ್ರತಿಯೊಬ್ಬ ನಾಗರಿಕನ ವಿಕಾಸಕ್ಕೆ ವೈಜ್ಞಾನಿಕ ಹಾಗೂ ವೈಚಾರಿಕ ಶಿಕ್ಷಣ ಅಗತ್ಯವೆಂದು ಸ್ಪಷ್ಟವಾಗಿ ಹೇಳಿದೆ. ಜಾತಿ, ಮೌಢ್ಯ ಮತ್ತು ಕಂದಾಚಾರಗಳಿಂದ ಕೂಡಿರುವ ಸಮಾಜದಲ್ಲಿ ಇವುಗಳನ್ನು ನಿವಾರಿಸುವ ಶಿಕ್ಷಣ ನೀಡುವುದು ಅತ್ಯವಶ್ಯಕ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಸಮಾನತೆ ಹೋಗಲಾಡಿಸಿದಾಗಲೇ ಮುಖ್ಯವಾಹಿನಿಗೆ
ಅಸಮಾನತೆಯಿಂದ ಕೂಡಿರುವ ಸಮಾಜದಲ್ಲಿ ಎಲ್ಲರೂ ಮುಖ್ಯವಾಹಿನಿಗೆ ಬರಬೇಕಾದರೆ ಸಾಮಾಜಿಕ ಬದಲಾವಣೆ ಅಗತ್ಯ. ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರಕಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣವನ್ನು ಶಿಕ್ಷಕರಿಂದ ಮಾತ್ರ ನೀಡಲು ಸಾಧ್ಯ. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಷ್ಟೇ ಇದೆ ಎಂದು ಅವರು ಹೇಳಿದರು.
ಬುದ್ಧಿ, ಕರುಣೆ ಮತ್ತು ಕೌಶಲ್ಯದ ಮಿಳಿತವೇ ನಿಜವಾದ ವಿಕಾಸಕ್ಕೆ ದಾರಿ ಎಂದು ಮಹಾತ್ಮಾ ಗಾಂಧಿಜಿಯವರ ಮಾತುಗಳನ್ನು ಸ್ಮರಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅತ್ಯಂತ ಗೌರವಿಸುವುದಾಗಿ ತಿಳಿಸಿದ ಅವರು, ತಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು.
ಸಂವಿಧಾನಬದ್ಧ ಕರ್ತವ್ಯ ನಿರ್ವಹಣೆಗೆ ಕರೆ
ಶಿಕ್ಷಕರು ಸಂವಿಧಾನಬದ್ಧ ಕರ್ತವ್ಯವನ್ನು ನಿಭಾಯಿಸಬೇಕು. ವಿಷಯಗಳನ್ನು ತರ್ಕಬದ್ಧವಾಗಿ ಪರಿಶೀಲಿಸಿ, ಪ್ರಶ್ನಿಸಿ ಒಪ್ಪಿಕೊಳ್ಳುವ ಸಂಸ್ಕೃತಿ ಮಕ್ಕಳಿಗೂ ಕಲಿಸಬೇಕು ಎಂದು ಸಲಹೆ ನೀಡಿದರು.
ಬೇಡಿಕೆಗಳ ಈಡೇರಿಕೆಗೆ ಭರವಸೆ
ಶಿಕ್ಷಕರ ಹಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಹಿಂದೆ ಹಣಕಾಸು ಸಚಿವರಾಗಿದ್ದಾಗ ಐದು ವರ್ಷಗಳಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದನ್ನು ಸ್ಮರಿಸಿದ ಅವರು, 6ನೇ ಹಾಗೂ 7ನೇ ವೇತನ ಆಯೋಗ ಜಾರಿಗೊಳಿಸಿರುವುದನ್ನೂ ಉಲ್ಲೇಖಿಸಿದರು. ಒಪಿಎಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು. ವೇತನ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮೇಲ್ಮನೆ ಸದಸ್ಯರು ಪುಟ್ಟಣ್ಣ ಹಾಗೂ ರಾಮೋಜಿ ಗೌಡ, ಪ್ರೊ. ಬರಗೂರು ರಾಮಚಂದ್ರಪ್ಪ, ಬಸವರಾಜ ಗುಳಿಕಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa