
ಇಸ್ಲಾಮಾಬಾದ್, 28 ಫೆಬ್ರವರಿ(ಹಿ.ಸ.) :
ಆ್ಯಂಕರ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಇತ್ತೀಚಿನ ಗಡಿ ಘರ್ಷಣೆಗಳು ಯುದ್ಧದಂತಹ ಪರಿಸ್ಥಿತಿಗೆ ತಿರುಗಿದ್ದು, ಎರಡೂ ದೇಶಗಳ ದಾಳಿಗಳಲ್ಲಿ ಒಟ್ಟಾರೆ 325ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್ 270 ಅಫ್ಘಾನ್ ತಾಲಿಬಾನ್ ಯೋಧರು ಮತ್ತು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡರೆ, ಕಾಬೂಲ್ 55ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ ಎಂದು ಪ್ರತಿದಾವೆ ಮಾಡಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು ಇಸ್ಲಾಮಾಬಾದ್ನ ತಾಳ್ಮೆ ಮುರಿದಿದೆ ಎಂದು ಹೇಳಿ, ಅಫ್ಘಾನಿಸ್ತಾನದ ವಿರುದ್ಧ ಮುಕ್ತ ಯುದ್ಧ ಘೋಷಿಸಿರುವುದಾಗಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪಾಕಿಸ್ತಾನಿ ಸೇನೆಯು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾ ಸೇರಿದಂತೆ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಅಫ್ಘಾನ್ ತಾಲಿಬಾನ್ ಪಡೆಗಳು ಡುರಾಂಡ್ ರೇಖೆ ಉದ್ದಕ್ಕೂ ಪಾಕಿಸ್ತಾನಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದುದಾಗಿ ಹೇಳಿಕೊಂಡಿವೆ.
ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಹೇಳಿಕೆಯಂತೆ, ಫೆಬ್ರವರಿ 26ರ ರಾತ್ರಿ 8 ಗಂಟೆಗೆ ಹೋರಾಟ ಆರಂಭವಾಗಿ, 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, ಎರಡು ಸೇನಾ ನೆಲೆಗಳು ಮತ್ತು 19 ಮಿಲಿಟರಿ ಪೋಸ್ಟ್ಗಳು ನಾಶವಾಗಿವೆ ಎಂದು ತಿಳಿಸಲಾಗಿದೆ. ಎಂಟು ತಾಲಿಬಾನ್ ಹೋರಾಟಗಾರರೂ ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಈ ಕಾರ್ಯಾಚರಣೆಗೆ “ಗಜಬ್-ಲಿಲ್-ಹಕ್” ಎಂದು ಹೆಸರು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಲಭ್ಯ ಯುದ್ಧಭೂಮಿ ಅಂದಾಜಿನ ಆಧಾರದ ಮೇಲೆ 274 ಅಫ್ಘಾನ್ ತಾಲಿಬಾನ್ ಸದಸ್ಯರು ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
73 ಶತ್ರು ಪೋಸ್ಟ್ಗಳನ್ನು ನಾಶಪಡಿಸಿ, 18ನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಂತರ-ಸೇವೆಗಳ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ದೇಶ ರಕ್ಷಣೆ ವೇಳೆ 12 ಪಾಕಿಸ್ತಾನಿ ಸೈನಿಕರು ಹುತಾತ್ಮರಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ ಮತ್ತು ಒಬ್ಬ ಸೈನಿಕ ಕಾಣೆಯಾಗಿದ್ದಾನೆ ಎಂದು ಮಾಹಿತಿ ನೀಡಲಾಗಿದೆ.
ಈ ಬೆಳವಣಿಗೆಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪರ ನಿಲ್ಲುವುದಾಗಿ ಪ್ರತಿಕ್ರಿಯಿಸಿದ್ದಾರೆ. ಸಂಘರ್ಷದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿ, ತಕ್ಷಣ ಹಿಂಸಾಚಾರ ನಿಲ್ಲಿಸಲು ಎರಡೂ ದೇಶಗಳಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಖೋಸ್ಟ್ ಮತ್ತು ಪಕ್ತಿಕಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 19 ನಾಗರಿಕರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆರೋಪಿಸಿದೆ. ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿಯ ಅಧ್ಯಕ್ಷೆ ಮಿರ್ಜಾನಾ ಸ್ಪೋಲ್ಜಾರಿಕ್ ಕೂಡ ಸಂಯಮ ಪಾಲಿಸಲು ಮನವಿ ಮಾಡಿದ್ದಾರೆ.
ಸಂಘರ್ಷದ ಹಿನ್ನೆಲೆ ಬ್ರಿಟನ್ ತನ್ನ ನಾಗರಿಕರಿಗೆ ಪಾಕಿಸ್ತಾನದ ಗಡಿ ಪ್ರದೇಶಗಳು, ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್ಖ್ವಾದ ಕೆಲವು ಭಾಗಗಳಿಗೆ ಪ್ರಯಾಣಿಸಬೇಡಿ ಎಂದು ಸೂಚಿಸಿದೆ. ಪಾಕಿಸ್ತಾನದಲ್ಲಿ ವಾಸಿಸುವ ಬ್ರಿಟಿಷ್ ನಾಗರಿಕರು ಮನೆಯೊಳಗೆ ಉಳಿಯುವಂತೆ ಸಲಹೆ ನೀಡಲಾಗಿದೆ.
ಪೂರ್ವ ಹಾಗೂ ಪಶ್ಚಿಮ ಗಡಿಗಳಲ್ಲಿನ ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸೇನೆ ಸಂಪೂರ್ಣ ಸಿದ್ಧವಾಗಿದೆ ಎಂದು ಪಾಕಿಸ್ತಾನ ಸೇನಾ ವಕ್ತಾರರು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪ್ರದೇಶದ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa