
ಬೆಂಗಳೂರು, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : “ಕುಣಿಯಲಾರದವನಿಗೆ ನೆಲ ಡೊಂಕು” ಎಂಬ ಗಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರಿ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು , ಬಿಜೆಪಿ ಅವಧಿಯಲ್ಲಿ ನಡೆದ ನೇಮಕಾತಿಗಳ ವಿವರಗಳನ್ನು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ನೇಮಕಾತಿಗಳು
ಶಿಕ್ಷಣ ಇಲಾಖೆಯಲ್ಲಿ 2022ರಲ್ಲಿ 15,000 ಶಿಕ್ಷಕರ ನೇಮಕ
ಆರೋಗ್ಯ ಇಲಾಖೆಯಲ್ಲಿ 1,048 ಹುದ್ದೆಗಳ ಭರ್ತಿ
ಅಬಕಾರಿ ಇಲಾಖೆಯಲ್ಲಿ 1,100 ಹುದ್ದೆಗಳ ಭರ್ತಿ
ಕೆಎಂಎಫ್ನಲ್ಲಿ 487 ಹುದ್ದೆಗಳ ಭರ್ತಿ
ಶಿಕ್ಷಣ ಇಲಾಖೆಯಲ್ಲಿ 778 ಪಿಯು ಉಪನ್ಯಾಸಕರ ಭರ್ತಿಗೆ ಕ್ರಮ
ಇಂಧನ ಇಲಾಖೆಯಲ್ಲಿ 1,492 ಇಂಜಿನಿಯರ್ ಹುದ್ದೆಗಳ ಭರ್ತಿ
ಆರೋಗ್ಯ/ಕುಟುಂಬ ಕಲ್ಯಾಣ ಇಲಾಖೆಯಲ್ಲಿ 320 ಹುದ್ದೆಗಳ ಭರ್ತಿ
ಗೃಹ ಇಲಾಖೆಯಲ್ಲಿ 3,484 ಕಾನ್ಸ್ಟೆಬಲ್ ಹುದ್ದೆಗಳ ನೇಮಕ
2021ರಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಗೆ 250 ಹುದ್ದೆಗಳ ನೇಮಕ
ತೋಟಗಾರಿಕೆ ಇಲಾಖೆಯಲ್ಲಿ 5,465 ಹುದ್ದೆಗಳ ಭರ್ತಿ
ರಾಜ್ಯದಲ್ಲಿ ಸುಮಾರು 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಹೇಳಿದ ಅಶೋಕ್, “ಸಂಪುಟ ದರ್ಜೆಯ ಹುದ್ದೆಗಳು ಮಾತ್ರ ತ್ವರಿತವಾಗಿ ಭರ್ತಿಯಾಗುತ್ತಿವೆ ಆದರೆ ಸಾಮಾನ್ಯ ಸರ್ಕಾರಿ ಹುದ್ದೆಗಳ ಭರ್ತಿ ಕಡೆಗಣಿಸಲಾಗಿದೆ” ಎಂದು ಟೀಕಿಸಿದ್ದಾರೆ.
“ಬಿಜೆಪಿ ಸರ್ಕಾರ ಕೇವಲ ಒಂದು ವರ್ಷದಲ್ಲಿ 30,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿತ್ತು. ಪ್ರಸ್ತುತ ಸರ್ಕಾರ ತಕ್ಷಣ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು; ಇಲ್ಲವಾದರೆ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa